ಬೆಂಗಳೂರು ಮೂಲದ 45 ವರ್ಷದ ವಸುಧಾ ಚಕ್ರವರ್ತಿ, ಭಾರತದ ಪ್ರಥಮ ಮಹಿಳಾ ವನ್ಯಜೀವಿ ಛಾಯಾಗ್ರಾಹಕರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದು, ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಆಗಸ್ಟ್ 27ರಂದು ಬೆಂಗಳೂರಿನಿಂದ ಕೊಲ್ಲೂರಿಗೆ ಬಂದಿದ್ದ ವಸುಧಾ, ನಂತರ ನಾಪತ್ತೆಯಾಗಿದ್ದರು.
ಶನಿವಾರ, ಆಗಸ್ಟ್ 30ರಂದು ನದಿಗೆ ಜಿಗಿದ ಪ್ರದೇಶದಿಂದ ಅಂದಾಜು 3 ಕಿಮೀ ದೂರದಲ್ಲಿ ಅವರ ಮೃತದೇಹ ಕಂಡುಬಂದಿತು.
ತ್ಯಾಗರಾಜನಗರ, ಬೆಂಗಳೂರು ಮೂಲದ ವಸುಧಾ, ಆಗಸ್ಟ್ 27ರಂದು ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದರು. ಅವರ ತಾಯಿ ವಿಮಲಾ ಹೇಳುವಂತೆ, ವಸುಧಾ ದೇವಸ್ಥಾನದ ಅತಿಥಿಗೃಹದ ಬಳಿ ವಾಹನ ನಿಲ್ಲಿಸಿ, ದೇವಸ್ಥಾನ ಪ್ರವೇಶಿಸಿದರು. ಬಳಿಕ ತಾಯಿ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಲಿಲ್ಲ. ಆಗಸ್ಟ್ 28ರಂದು ವಿಮಲಾ ಅವರು ಕೊಲ್ಲೂರಿಗೆ ತೆರಳಿ ವಿಚಾರಿಸಿದಾಗ, ದೇವಸ್ಥಾನ ಸಿಬ್ಬಂದಿ “ಅವರು ಅಸಮಾಧಾನಗೊಂಡಂತೆ ಕಂಡುಬಂದರು” ಎಂದು ವಿವರಿಸಿದರು.
ಮಗಳು ಪತ್ತೆಯಾಗದಿದ್ದಾಗ, ವಿಮಲಾ ಅವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು, ಬೈಂದೂರಿನ ಅಗ್ನಿಶಾಮಕ ದಳ ಮತ್ತು ನುರಿತ ಈಜುಗಾರ ಈಶ್ವರ್ ಮಲ್ಪೆ ಅವರ ತಂಡದೊಂದಿಗೆ ಶೋಧ ಕಾರ್ಯ ನಡೆಸಿದಾಗ, ಸ್ಥಳೀಯರು “ಮಹಿಳೆಯೊಬ್ಬರು ನದಿಗೆ ಹಾರಿದ್ದಾರೆ” ಎಂದು ಮಾಹಿತಿ ನೀಡಿದ್ದರು. ತೀವ್ರ ಶೋಧದ ನಂತರ, ಪೊದೆಯೊಂದರಲ್ಲಿ ಸಿಲುಕಿದ್ದ ಅವರ ಮೃತದೇಹ ಪತ್ತೆಯಾಗಿತ್ತು.
ವನ್ಯಜೀವಿ ಛಾಯಾಗ್ರಹಣ ಲೋಕದಲ್ಲಿ ಪುರುಷರೇ ಹೆಚ್ಚು ಸಕ್ರಿಯರಾಗಿದ್ದ ಸಮಯದಲ್ಲಿ, ತಮ್ಮದೇ ಆದ ಛಾಪು ಮೂಡಿಸಿದ್ದವರು ವಸುಧಾ ಚಕ್ರವರ್ತಿ. ಬ್ಯಾಂಕಿಂಗ್ ವೃತ್ತಿ ತೊರೆದು, ತಮ್ಮ ಹವ್ಯಾಸದ ಹಾದಿ ಹಿಡಿದು ನೀಲಗಿರಿಗಳಲ್ಲಿ ನೆಲೆಸಿದರು. ಕಲ್ಹಟ್ಟಿ ಎಸ್ಟೇಟ್ನಲ್ಲಿ ವಾಸಿಸುತ್ತಾ, ಅರಣ್ಯದ ಅಪರೂಪದ ಕ್ಷಣಗಳನ್ನು ಚಿತ್ರಗಳಲ್ಲಿ ಉಳಿಸಿಕೊಂಡರು. ಅವರ ನಿರ್ಧಾರವನ್ನು ಕುಟುಂಬ ಪ್ರಥಮದಲ್ಲಿ ವಿರೋಧಿಸಿತ್ತು.
ಕೋಲ್ಕತ್ತಾದಲ್ಲಿ “ಕ್ಲೌಡೆಡ್ ಲೆಪರ್ಡ್” (ಮಂಜು ಚಿರತೆ) ಕುರಿತ ಸಾಕ್ಷ್ಯಚಿತ್ರದಿಂದ ಪ್ರೇರಿತರಾಗಿ, ಅವರು ತಮ್ಮ ಜೀವನದ ದಿಕ್ಕನ್ನೇ ಬದಲಿಸಿಕೊಂಡಿದ್ದರು. “ಅವರ ಕೈಯಲ್ಲಿ ಕ್ಯಾಮೆರಾ ಇದ್ದರೆ, ಅವರು ತಮ್ಮದೇ ಲೋಕದಲ್ಲಿರುತ್ತಿದ್ದರು. ವನ್ಯಜೀವಿಗಳ ಬಗ್ಗೆ ಅವರಿಗಿದ್ದ ನಿರ್ಭಯತೆ ಅದ್ಭುತವಾಗಿತ್ತು” ಎಂದು ಅವರ ಸ್ನೇಹಿತರೊಬ್ಬರು ಸ್ಮರಿಸುತ್ತಾರೆ.
ವಸುಧಾ ಅವರು ಕೇವಲ ಛಾಯಾಗ್ರಾಹಕಿಯಾಗಿರಲಿಲ್ಲ, ನೀಲಗಿರಿ ಪ್ರದೇಶದ ಆದಿವಾಸಿ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಊಟಿ, ಮಸಿನಗುಡಿ, ಮುದುಮಲೈ ಮತ್ತು ಬಂಡೀಪುರದ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು.
ವೃತ್ತಿಜೀವನದ ಆರಂಭದಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ, ಅವರು ಊಟಿಯಲ್ಲಿ ಪ್ರವಾಸಿಗರಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರು ಮತ್ತು ಮಾಡೆಲಿಂಗ್ ಛಾಯಾಗ್ರಹಣದಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ವಿ.ಕೆ. ಪ್ರಕಾಶ್ ಅವರೊಂದಿಗೂ ಕೆಲಸ ಮಾಡಿದ್ದರು. ವಸುಧಾ ಅವರ ಅಕಾಲಿಕ ಮತ್ತು ನಿಗೂಢ ಸಾವು, ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣಾ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.






