ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ದೇಶದ ಮಟ್ಟದಲ್ಲಿ ಗಮನ ಸೆಳೆದಿತ್ತು. ಗೋಲಿಬಾರಿನಲ್ಲಿ ಅನೇಕ ಮಂದಿ ಮೃತರಾಗಿದ್ದರು. ಇದೀಗ ಇದೇ ಮೈದಾನದ ಸಂಬಂಧ ಮತ್ತೆ ಹೊಸ ವಿವಾದ ಹುಟ್ಟಿಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಬಿಜೆಪಿ ನೇತೃತ್ವದಲ್ಲಿ, ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಮರು ನಾಮಕರಣ ಮಾಡಲು ಮುಂದಾಗಿದೆ. ಇದಕ್ಕೆ ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದ ಹುಬ್ಬಳ್ಳಿಯಲ್ಲಿ ಮತ್ತೊಂದು ಆರೋಪ ಪ್ರತ್ಯಾರೋಪ ಸುತ್ತಿಗೆ ಕಾರಣವಾಗಿದೆ.
ಕರ್ನಾಟಕದ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ನಗರದ ಹೃದಯಭಾಗದಲ್ಲಿರುವ ಈದ್ಗಾ ಮೈದಾನವು ದೊಡ್ಡ ಇತಿಹಾಸವನ್ನು ಹೊಂದಿದೆ. ಸುಮಾರು 1.5 ಎಕರೆ ವಿಸ್ತೀರ್ಣದ ಈ ಜಾಗವು ದಶಕಗಳ ಹಿಂದಿನಿಂದಲೇ ವಿವಾದಿತ ಸ್ಥಳವಾಗಿದೆ. ಮೈದಾನದ ಸುತ್ತಲಿನ ಹೋರಾಟಗಳು ಮತ್ತು ವಿರೋಧ ಆಂದೋಲನಗಳು ರಾಷ್ಟ್ರಮಟ್ಟದ ಗಮನ ಸೆಳೆದಿವೆ. ಈ ಮೈದಾನವು ಸಾರ್ವಜನಿಕ ಸಭೆ, ಧಾರ್ಮಿಕ ಕಾರ್ಯಕ್ರಮ ಮತ್ತು ರಾಜಕೀಯ ಚರ್ಚೆಗಳ ಪ್ರಮುಖ ವೇದಿಕೆಯಾಗಿ ಪ್ರಸಿದ್ಧಿ ಪಡೆದಿದೆ. ಕಳೆದ ಹಲವು ದಶಕಗಳಿಂದ ಈ ಸ್ಥಳವು ಸಮುದಾಯಗಳು, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ಹೋರಾಟಗಳಿಗೆ ಸಾಕ್ಷಿಯಾಗಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಬ್ರಿಟಿಷರ ಕಾಲದಲ್ಲೇ ಅಂಜುಮನ್ ಸಂಸ್ಥೆಗೆ 999 ವರ್ಷ ಕಾಲ ಲೀಸ್ ನೀಡಲಾಗಿತ್ತು ಮತ್ತು ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ನಡೆಸಲು ಅವಕಾಶ ದೊರಕಿತ್ತು. ಸ್ವಾತಂತ್ರ್ಯ ನಂತರವೂ ಈ ಪದ್ಧತಿ ನಡೆಯುತ್ತಿತ್ತು. 1980 ರಲ್ಲಿ ಅಂಜುಮನ್ ಸಂಸ್ಥೆ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲು ಯತ್ನಿಸಿದಾಗ, ಮಹಾನಗರ ಪಾಲಿಕೆ ತಡೆಯನ್ನು ಹೇರಿತು. ಬಳಿಕ ಕೋರ್ಟ್ನಲ್ಲಿ ಪ್ರಕರಣ ಹೋದರೂ, ಸುಪ್ರೀಂ ಕೋರ್ಟ್ ಆದೇಶದಿಂದ ಜಾಗ ಪಾಲಿಕೆಗೆ ಸೇರಿದಂತೆ ತೀರ್ಮಾನವಾದುದು, ಪ್ರಕರಣಕ್ಕೆ ಅಂತ್ಯ ತಂದಿತು.
1992 ರಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿಯವರು ಜಮ್ಮು-ಕಾಶ್ಮೀರದಲ್ಲಿ ತಿರಂಗ ಯಾತ್ರೆ ಆರಂಭಿಸಿದ್ದರು. ಸ್ಥಳೀಯ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡುವ ಉದ್ದೇಶದಿಂದ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತಿರಂಗಾರೋಹಣ ಮಾಡಲು ಮುಂದಾಗಿದ್ದರು. ಅಂಜುಮನ್ ಸಂಸ್ಥೆ, ಮೈದಾನವು ಅವರ ಹಕ್ಕು ಸ್ಥಳವಲ್ಲವೆಂದು ವಿರೋಧ ವ್ಯಕ್ತಪಡಿಸಿತು. ಇದರಿಂದ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು ಮತ್ತು ಗೋಲಿಬಾರ್ನಲ್ಲಿ ಅನೇಕರು ಮೃತಪಟ್ಟರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಅನೇಕರು ಮೈದಾನಕ್ಕೆ ನುಗ್ಗಿ ತಿರಂಗ ಹಾರಿಸಿದರು. 1994 ರ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಉಮಾ ಭಾರತಿ ಅವರನ್ನು ಆಹ್ವಾನ ಮಾಡಲಾಗಿತ್ತು, ಆದರೆ ರಾಜ್ಯ ಸರ್ಕಾರ ಅವಕಾಶ ನೀಡಲಿಲ್ಲ. ಈ ಘಟನೆಯಲ್ಲಿಯ ಗಲಾಟೆಯಿಂದ ಗೋಲಿಬಾರ್ ಸಂಭವಿಸಿತು.
ಹಲವು ವಿವಾದಗಳಿಂದ ಹೆಸರಾಗಿರುವ ಈದ್ಗಾ ಮೈದಾನಲ್ಲಿ ಈಗ ಈ ಮೈದಾನದಲ್ಲಿ ಮುಸ್ಲಿಂ ಸಮುದಾಯವು ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ನಡೆಸುತ್ತಿದ್ದರೆ, ಗಣೇಶ ಹಬ್ಬದಲ್ಲಿ ಹಿಂದೂ ಸಮುದಾಯವು ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಸುತ್ತಿದೆ. ಈ ರೀತಿಯ ಜಾಗದ ವಿಷಯದಲ್ಲಿ ಹೊಸ ವಿವಾದ ಹುಟ್ಟಿದೆ.
ರಾಣಿ ಚೆನ್ನಮ್ಮ ಮೈದಾನಕ್ಕೆ ಹೆಸರಿಡಲು ಪಾಲಿಕೆ ತೀರ್ಮಾನ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಬಿಜೆಪಿ ನೇತೃತ್ವದಲ್ಲಿ, ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಮರುನಾಮಕರಣ ಮಾಡಲು ಮುಂದಾಗಿದೆ. 2022 ರ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನವನ್ನು ಅನುಮೋದಿಸಲಾಗಿದೆ. ಬಿಜೆಪಿ ನಾಯಕರ ಹೇಳಿಕೆಯಲ್ಲಿ, ಸರ್ಕಾರಕ್ಕೆ ಕಳುಹಿಸಿ ಹೆಸರು ಬದಲಾವಣೆ ಖಂಡಿತಾ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
“ಇದು ಪಾಲಿಕೆಗೆ ಸೇರಿದ ಜಾಗವಾಗಿದೆ. ಹೀಗಾಗಿಯೇ ಅದಕ್ಕೆ ಹೆಸರು ಇಡಲು ಪಾಲಿಕೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಠರಾವು ಪಾಸ್ ಮಾಡಲಾಗಿದೆ. ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ, ಹೆಸರು ಬದಲಾವಣೆ ಮಾಡಿಯೇ ಮಾಡುತ್ತೇವೆ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಬಿಜೆಪಿಯಿಂದ ಕೋಮುದಲ್ಲೂರಿ ಸೃಷ್ಟಿಗೆ ಯತ್ನ ಎಂದು ಕಾಂಗ್ರೆಸ್ ಆರೋಪ. ಬಿಜೆಪಿ ಪಾಲಿಕೆ ಸದಸ್ಯರು ಮತ್ತು ನಾಯಕರು ಮೈದಾನದ ಹೆಸರು ಬದಲಿಸುವ ಯೋಜನೆಯಲ್ಲಿದ್ದಾರೆ. ಇದಕ್ಕೆ ಪಾಲಿಕೆಯ ಕಾಂಗ್ರೆಸ್ ಶಾಸಕರು ಮತ್ತು ಸ್ಥಳೀಯ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಈಗ ಶಾಂತವಾಗಿದೆ, ಆದರೆ ಕಳೆದ ಕೋಮು ಗಲಭೆಯಿಂದ ನಗರವು ಸಾಕಷ್ಟು ತೊಂದರೆ ಅನುಭವಿಸಿದೆ. ಈಗ ನಗರದಲ್ಲಿ ಅಶಾಂತಿ ಹುಟ್ಟಿಸಲು ಈ ಪ್ರಯತ್ನವಾಗುತ್ತಿದೆ ಎಂದು ಆರೋಪಿಸಲಾಗಿದೆ. ಮೈದಾನ ಸಮೀಪ ಈಗ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಇದೆ. ಬೇರೆ ಸ್ಥಳದಲ್ಲಿ ಹೆಸರು ಹಾಕಬಹುದು, ಆದರೆ ಮೈದಾನಕ್ಕೆ ಈಗಾಗಲೇ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ನಡೆಯುತ್ತಿದೆ. ಈ ಹಿನ್ನೆಲೆ ಹಿನ್ನೆಲೆಯಲ್ಲಿ, ಹೆಸರು ಬದಲಾವಣೆ ಅಗತ್ಯವೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮತ್ತು ಮುಸ್ಲಿಂ ಮುಖಂಡರು ಕೇಳಿದ್ದಾರೆ.






