ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಪಾಲ್ಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಅವರು ರಾಷ್ಟ್ರಪತಿಯನ್ನು ಉದ್ದೇಶಿಸಿ “ನಿಮಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಿದೆಯೇ?” ಎಂದು ಕೇಳಿದರು. ಇದಕ್ಕೆ ರಾಷ್ಟ್ರಪತಿಗಳು ಉತ್ತರಿಸಿದ್ದು, ವಿಡಿಯೋ ವೈರಲ್ ಆಗಿದೆ.
ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು “ನಿಮಗೆ ಕನ್ನಡ ಗೊತ್ತೇ?” ಎಂದು ರಾಷ್ಟ್ರಪತಿ ಮುರ್ಮು ಅವರನ್ನು ಪ್ರಶ್ನಿಸಿದರು. ತಕ್ಷಣವೇ “ ರಾಷ್ಟ್ರಪತಿ ಮುರ್ಮು ನಾನು ಕನ್ನಡದಲ್ಲೇ ಮಾತನಾಡುತ್ತೇನೆ” ಎಂದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, “ಕನ್ನಡ ನನ್ನ ಮಾತೃಭಾಷೆ ಅಲ್ಲದಿದ್ದರೂ, ನಮ್ಮ ದೇಶದ ಪ್ರತಿಯೊಂದು ಭಾಷೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ನಾನು ಆಳವಾಗಿ ಗೌರವಿಸುತ್ತೇನೆ” ಎಂದು ಅಚ್ಚರಿ ಉತ್ತರ ನೀಡಿದರು.
ನನಗೆ ಪ್ರತಿಯೊಂದು ಭಾಷೆಯ ಮೇಲೂ ಅಪಾರ ಗೌರವವಿದೆ. ಭಾರತದಲ್ಲಿ ಎಷ್ಟು ಭಾಷೆಗಳು, ಎಷ್ಟು ಸಂಸ್ಕೃತಿಗಳು, ಎಷ್ಟು ಪರಂಪರೆಗಳಿವೆ! ಅವುಗಳೆಲ್ಲಾ ನನಗೆ ಬಹಳ ಇಷ್ಟ. ಕನ್ನಡ ನನಗೆ ಸ್ವಲ್ಪಸ್ವಲ್ಪ ಗೊತ್ತಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಭಾಷೆಯನ್ನು ಜೀವಂತವಾಗಿಡಲು, ತಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡಲು ಪ್ರಯತ್ನಿಸಬೇಕು. ಆ ದಿಕ್ಕಿನಲ್ಲಿ ಎಲ್ಲರೂ ಸಾಗಬೇಕು. ನಾನು ನಿಧಾನವಾಗಿ ಕನ್ನಡ ಕಲಿಯಲು ಖಂಡಿತ ಪ್ರಯತ್ನಿಸುತ್ತೇನೆ ಎಂದು ರಾಷ್ಟ್ರಪತಿ ಮುರ್ಮು ನಗುತ್ತಲೇ ಹೇಳಿದರು.
ಮಾತು ಬರದ, ಕಿವಿ ಕೇಳದ 3.3 ಲಕ್ಷ ಮಂದಿ ನಮ್ಮ ದೇಶದಲ್ಲಿದ್ದಾರೆ. ಇವರಿಗಾಗಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ ಎಂಬುದು ನಮ್ಮ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಹೆಮ್ಮೆ. ಧ್ವನಿಯಿಲ್ಲದವರಿಗೆ ಧ್ವನಿ ನೀಡುತ್ತಿರುವ, ಶ್ರವಣ ಸಮಸ್ಯೆಯಿಂದ ಬಳಲುವವರಿಗೆ ಹೊಸ ಜೀವನ ತುಂಬುತ್ತಿರುವ ಈ ಸಂಸ್ಥೆ ಮೈಸೂರಿನಲ್ಲಿ ವಜ್ರಮಹೋತ್ಸವ ಆಚರಿಸುತ್ತಿರುವುದು ನಮಗೆಲ್ಲರಿಗೂ ಗೌರವದ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮನುಷ್ಯರಿಗೆ ದೇಹದ ಎಲ್ಲಾ ಅಂಗಗಳು ಮುಖ್ಯ. ಕಣ್ಣು, ಕಿವಿಗಳು ಅತಿ ಮುಖ್ಯವಾದ ಅಂಗಗಳು. ದೃಷ್ಟಿ ಮತ್ತು ಶಬ್ಧಗಳ ಗ್ರಹಿಕೆಯು ಮನುಷ್ಯರ ಮಾತುಗಳನ್ನು ರೂಪಿಸುತ್ತವೆ ಹಾಗೂ ನಿಯಂತ್ರಿಸುತ್ತವೆ. 2011ರ ರಾಷ್ಟ್ರೀಯ ಜನಗಣತಿಯ ಪ್ರಕಾರ ರಾಜ್ಯದಲ್ಲಿ 3.3 ಲಕ್ಷ ಜನರು ಮಾತು ಬಾರದವರು ಹಾಗೂ ಕಿವಿ ಕೇಳಿಸದವರಿದ್ದಾರೆ. ಅಸಹಾಯಕರು ನಮಗೆ ಅಂಕಿ ಸಂಖ್ಯೆಗಳಲ್ಲ, ಜೀವಂತ ಮನುಷ್ಯರ ನಿರಂತರ ಕಷ್ಟದ ಉದಾಹರಣೆಗಳು. ಹಾಗಾಗಿ ಈ ಸಮಸ್ಯೆಯಿರುವವರನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ನಾಗರಿಕ ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.
ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕು. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ ಸಂಸ್ಥೆಗೆ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ರಾಷ್ಟ್ರಪತಿಗೆ ಕನ್ನಡ ಗೊತ್ತೇ? ಎಂದು ಕೇಳಿದ ಸಿಎಂ; ದ್ರೌಪದಿ ಮುರ್ಮು ಅವರಿಂದ ಅಚ್ಚರಿಯ ಪ್ರತಿಕ್ರಿಯೆ
By krutika naik
On: September 2, 2025 9:09 AM
---Advertisement---






