ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 25ರ ರಾತ್ರಿ ಬಾಗಲೂರಿನ ಬಳಿ ಕಾರ್ಯಗಳನ್ನು ಪರಿಶೀಲಿಸಿ, ‘ಗುಂಡಿ ಗಮನ’ ಎಂಬ ಸಾರ್ವಜನಿಕ ಆಪ್ ಕುರಿತು ಮಾಹಿತಿ ನೀಡಿದರು. ಈ ಆಪ್ ಮೂಲಕ ನಾಗರಿಕರು ರಸ್ತೆ ಗುಂಡಿಗಳ ಬಗ್ಗೆ ನೇರವಾಗಿ ದೂರು ಸಲ್ಲಿಸಬಹುದಾಗಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿರುವ ಗುಂಡಿಗಳ ವಿವರಗಳನ್ನು ವರದಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾಗರಿಕ ಪ್ರಾಧಿಕಾರವು ‘ಗುಂಡಿ ಗಮನ’ ಎಂಬ ಸಾರ್ವಜನಿಕ ಕೇಂದ್ರಿತ ಅಪ್ಲಿಕೇಶನ್ ಮೂಲಕ ಗುಂಡಿಗಳ ಮೇಲ್ವಿಚಾರಣೆ ಹಾಗೂ ದುರಸ್ತಿಯನ್ನು ತ್ವರಿತಗೊಳಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಈ ಆಯಪ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಪೊಲೀಸರು ತಮ್ಮ ವ್ಯಾಪ್ತಿಯಲ್ಲಿರುವ ಗುಂಡಿಗಳ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯ. ಇದೀಗಾಗಲೇ ಬೆಂಗಳೂರಿನಲ್ಲಿ 5,000 ಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 4,400ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮಾತ್ರವೇ 2,200 ಗುಂಡಿಗಳನ್ನು ಮುಚ್ಚಲಾಗಿದೆ. ಇದಲ್ಲದೆ, ನಾಗರಿಕ ಸಂಸ್ಥೆ ಸ್ಕೈವಾಕ್ಗಳ ಸ್ವಚ್ಛತೆ ಮತ್ತು ನಗರದಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇವಲ ಗುಂಡಿ ಮುಚ್ಚುವುದಷ್ಟೇ ಸಾಕಾಗದೆ, ಅದರ ಗುಣಮಟ್ಟವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ಪ್ರಸ್ತುತ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋ-ಫಿಕ್ಸ್ ಎಂಬ ಮೂರು ವಿಧಾನಗಳ ಮೂಲಕ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಲಾಗಿದೆ.
ರಸ್ತೆ ನಿರ್ಮಾಣದ ದುರಸ್ಥ ಗುಣಮಟ್ಟ, ಭಾರೀ ವಾಹನ ಸಂಚಾರ ಹಾಗೂ ಮಳೆಯಂತಹ ಅಂಶಗಳು ರಸ್ತೆ ದೀರ್ಘಾವಧಿ ಬಾಳಿಕೆಗೆ ಅಡ್ಡಿಯಾಗುತ್ತವೆ. ಈ ಕಾರಣಗಳಿಂದಲೇ ಹಂತ ಹಂತವಾಗಿ ಕಾಂಕ್ರೀಟ್ ರಸ್ತೆಗಳತ್ತ (ವೈಟ್ ಟಾಪಿಂಗ್) ಒಲವು ತೋರಲಾಗುತ್ತಿದ್ದು, ಇವು 30 ವರ್ಷಗಳವರೆಗೆ ಸುಸ್ಥಿರವಾಗಿರುತ್ತವೆ ಎಂದು ತಿಳಿಸಲಾಗಿದೆ.
ಬೆಂಗಳೂರು ನಿವಾಸಿಗಳು ತಮ್ಮ ಬಡಾವಣೆ ಅಥವಾ ದಿನನಿತ್ಯ ಬಳಸುವ ರಸ್ತೆಗಳ ಮೇಲೆ ಗುಂಡಿ ಕಂಡರೆ, ‘ಗುಂಡಿ ಗಮನ’ ಆಪ್ ಮೂಲಕ ದೂರು ಸಲ್ಲಿಸಿದ ತಕ್ಷಣ ಬಿಬಿಎಂಪಿ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತದೆ. ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡುವ ಈ ಆಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದ್ದು, ನಾಗರಿಕರು ಇದನ್ನು ಡೌನ್ಲೋಡ್ ಮಾಡಿಕೊಂಡು, ಗುಂಡಿ ಕಂಡ ಕೂಡಲೇ ಮಾಹಿತಿ ಹಂಚಿದರೆ ದುರಸ್ತಿ ಕಾರ್ಯಕ್ಕೆ ಸಹಕರಿಸಬಹುದು.






