ರಷ್ಯಾ ತೈಲ ಖರೀದಿಯ ವಿಷಯದಲ್ಲಿ ಅಮೆರಿಕದ ಎಚ್ಚರಿಕೆಗೆ ಭಾರತ ತಲೆಬಾಗದ ಕಾರಣ, ಟ್ರಂಪ್ ಅವರು ಹೆಚ್ಚುವರಿ ಶೇಕಡಾ 25ರಷ್ಟು ಸುಂಕ ಹಾಕುವುದಾಗಿ ಘೋಷಿಸಿದರು. ಈ ಸುಂಕದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ 21 ದಿನಗಳ ಅವಧಿಯನ್ನು ಒಪ್ಪಂದಕ್ಕಾಗಿ ನೀಡಲಾಯಿತು. ಆದರೆ ಯಾವುದೇ ಒಪ್ಪಂದ ಕೈಗೂಡದ ಹಿನ್ನೆಲೆ, ಹೆಚ್ಚುವರಿ ಸುಂಕ ಸೇರಿ ಒಟ್ಟು ಶೇಕಡಾ 50ರಷ್ಟು ಸುಂಕವನ್ನು ಜಾರಿಗೊಳಿಸಲಾಯಿತು.
ಟ್ರಂಪ್ ಅವರ ಈ ನಿರ್ಧಾರದಿಂದ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದು, ಕಳೆದ ಕೆಲವು ವಾರಗಳಲ್ಲಿ ಅಮೆರಿಕ ಅಧ್ಯಕ್ಷರಿಂದ ಬಂದ ನಾಲ್ಕು ಫೋನ್ ಕರೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಮೋದಿ ಕರೆ ಸ್ವೀಕರಿಸದಿರುವುದು ಟ್ರಂಪ್ ವಿರುದ್ಧದ ಎಚ್ಚರಿಕೆ ಮತ್ತು ಪ್ರತಿಭಟನೆಯ ಸಂಕೇತವೆಂದು ಜರ್ಮನಿಯ ಫ್ರಾಂಕ್ಫುಟರ್ ಆಲ್ಗಮೈನೆ ಝೈಟುಂಗ್ (FAZ) ಪತ್ರಿಕೆ ತಿಳಿಸಿದೆ. ಮೋದಿ ಅವರ ಪ್ರತಿಕ್ರಿಯೆಯ ಕೊರತೆಯಿಂದ ಟ್ರಂಪ್‌ನ ನಿರಾಸೆ ಹೆಚ್ಚಾಗಿದೆ ಎಂದು ಜಪಾನ್‌ನ ನಿಕ್ಕೈ ಏಷ್ಯಾ ಪತ್ರಿಕೆ ವರದಿ ಮಾಡಿದೆ.
ಈ ಕ್ರಮವನ್ನು “ಎಚ್ಚರಿಕೆಯ ಸಂದೇಶ” ಎಂದು ಬಣ್ಣಿಸಲಾಗಿದೆ, ಇದು ಭಾರತದ ದೃಢವಾದ ರಾಜಕೀಯ ನಿಲುವನ್ನು ಪ್ರತಿಬಿಂಬಿಸುತ್ತದೆ. ಈ ಘಟನೆಯಿಂದ ಕಳೆದ 25 ವರ್ಷಗಳಿಂದ ಬೆಳೆಸಿಕೊಂಡಿರುವ ಭಾರತ-ಅಮೆರಿಕ ಸೌಹಾರ್ದಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ಕುರಿತು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಆಶಾವಾದಿ ನಿಲುವು ಪ್ರಕಟಿಸಿದ್ದಾರೆ.
ಭಾರತ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಪಡೆಯುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ್ದಾರೆ.
ಈ ಬಗ್ಗೆ ಫಾಕ್ಸ್ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಬೆಸೆಂಟ್ ಹೇಳಿದ್ದಾರೆ, “ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಅಮೆರಿಕವು ವಿಶ್ವದ ಅತಿದೊಡ್ಡ ಆರ್ಥಿಕತೆ. ಕೊನೆಗೆ ನಾವು ಒಗ್ಗಟ್ಟಾಗಿ ಮುಂದುವರಿಯುತ್ತೇವೆ.”ಬೆಸೆಂಟ್ ಅವರು ಈ ವಿವಾದದ ಹೊರತಾಗಿಯೂ ಇಬ್ಬರು ನಾಯಕರ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.
“ಇದು ತುಂಬಾ ಸಂಕೀರ್ಣ ಸಂಬಂಧ. ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ನಡುವೆ ಉತ್ತಮ ಸಂಬಂಧವಿದೆ,” ಎಂದು ಅವರು ತಿಳಿಸಿದ್ದಾರೆ. ಆದರೆ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿರುವುದು ಮತ್ತು ವಾಣಿಜ್ಯ ಒಪ್ಪಂದದ ಮಾತುಕತೆಗಳಲ್ಲಿ ತೊಡಗಿಕೊಂಡಿದ್ದರೂ ಒಪ್ಪಂದಕ್ಕೆ ಬರದಿರುವುದು ಘರ್ಷಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ಬೆಸೆಂಟ್ ಗಮನಿಸಿದ್ದಾರೆ. “ಭಾರತವು ಆರಂಭದಲ್ಲಿಯೇ ಶುಲ್ಕದ ಮಾತುಕತೆಗೆ ಬಂದಿತ್ತು, ಆದರೆ ಇನ್ನೂ ಒಪ್ಪಂದವಾಗಿಲ್ಲ. ಭಾರತದ ಕೆಲವು ನಿಲುವುಗಳು ‘ಪ್ರದರ್ಶನಾತ್ಮಕ’ವಾಗಿವೆ,” ಎಂದು ಅವರು ಹೇಳಿದ್ದಾರೆ.







1 thought on “ಮೋದಿ ಟ್ರಂಪ್ ಸಂಬಂಧ ಹಳಸಿತೇ? ಟ್ರಂಪ್ 4 ಬಾರಿ ಕರೆ ಮಾಡಿದ್ರೂ ಸ್ವೀಕಾರಿಸದ ಮೋದಿ!”