ಗದಗದಲ್ಲಿ ಮಾತ್ರವಲ್ಲ, ರಾಜ್ಯದ ಅನೇಕ ಕಡೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ವಿಶೇಷವಾಗಿ ಗದಗದ ಹಲವೆಡೆ ಮಕ್ಕಳ ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿ ಜನರಿಗೆ ಕಿರಿಕಿರಿ ತಂದಿವೆ. ಇದರಿಂದ ಎಲ್ಲರೂ ಬೇಸತ್ತು ಹೋಗಿದ್ದಾರೆ. ಆದರೆ, “ಉಪಾಯ ಬಲ್ಲವನಿಗೆ ಅಪಾಯವಿಲ್ಲ” ಎನ್ನುವ ಗಾದೆಯಂತೆ, ಇಲ್ಲಿನ ಜನರು ಕಂಡುಹಿಡಿದ ಒಂದು ಸರಳ ವಿಧಾನ ನಾಯಿಗಳ ಕಾಟವನ್ನು ತಡೆಹಿಡಿದಿದೆ.
ಈ ಉಪಾಯವೇನೆಂದರೆ, ಕೆಂಪು ಮತ್ತು ಹಳದಿ ಬಣ್ಣದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರ್ಧ ನೀರು ತುಂಬಿಸಿ ಮನೆಯ ಜಗಲಿ ಅಥವಾ ಸಿಟೌಟ್ನಲ್ಲಿ ಇಡುವುದು. ಇದನ್ನು ಕಂಡ ಬೀದಿ ನಾಯಿಗಳು ಹತ್ತಿರ ಬರದೆ ದೂರ ಸರಿಯುತ್ತವೆ. ಹತ್ತಿರ ಬಂದರೂ, ಬಾಟಲಿಯನ್ನು ಕಂಡ ತಕ್ಷಣವೇ ಓಡಿಹೋಗುತ್ತವೆ.
ಮೂದಲಲ್ಲಿ ಕೆಲವೇ ಮನೆಗಳಲ್ಲಿ ಆರಂಭವಾದ ಈ ಪ್ರಯೋಗ ಫಲಕಾರಿಯಾಗಿ ತೋರಿಕೊಂಡ ನಂತರ, ಈಗ ಅನೇಕ ಮನೆಗಳು ಈ ವಿಧಾನವನ್ನು ಅಳವಡಿಸಿಕೊಂಡಿವೆ.
ಅಚ್ಚರಿಯ ಸಂಗತಿಯೇನಂದರೆ – ಬಾಟಲಿಯನ್ನು ಕಂಡ ನಾಯಿಗಳು ಏಕೆ ಓಡಿಹೋಗುತ್ತವೆ ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿದೆ. ಜನರಿಗೆ ಉತ್ತರ ಗೊತ್ತಿಲ್ಲ. ಆದರೂ ಫಲಿತಾಂಶ ಯಶಸ್ವಿಯಾಗಿದೆ ಎಂಬುದು ಸತ್ಯ. ಹೀಗಾಗಿ ಈ ವಿಧಾನವನ್ನು ಇನ್ನೂ ಹಲವೆಡೆ ಪ್ರಯೋಗಿಸಲಾಗುತ್ತಿದೆ. ಆದರೆ, ಬೀದಿ ನಾಯಿಗಳೇ ತುಂಬಿರುವ ನಗರ ಪ್ರದೇಶಗಳಲ್ಲಿ ಇದು ಫಲಿತಾಂಶ ಕೊಡುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಬಾಟಲಿಯಲ್ಲಿ ನೀರು ತುಂಬಿ ಇಟ್ಟಾಗ ನಾಯಿಗಳು ಹತ್ತಿರ ಬರದೇ ದೂರ ಸರಿಯುವ ಕಾರಣವನ್ನು ಪಶುವೈದ್ಯರಿಗೆ ಕೇಳಿದಾಗ, ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗದಗದ ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಅವರ ಅಭಿಪ್ರಾಯದಲ್ಲಿ, ಬಾಟಲಿ ಉಪಾಯದ ಹಿಂದೆ ವಿಜ್ಞಾನವಿಲ್ಲ. ಹಿಂದೆ ಜನರು ಕೀಟಗಳಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಚೀಲಗಳಲ್ಲಿ ನೀರು ತುಂಬಿ ಹಾಕುತ್ತಿದ್ದರೂ, ಅದು ನಾಯಿಗಳಿಗೆ ಪರಿಣಾಮಕಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
HUDCO ಕಾಲೋನಿಯ ಪ್ರಕಾಶ್ ಸೋಮರೆಡ್ಡಿ ಹೇಳುವುದೇನೆಂದರೆ, “ನಮ್ಮ ಮನೆಯ ಹತ್ತಿರ ನಾಯಿ ಕಡಿದ ಘಟನೆ ಕಂಡು, ಪರಿಹಾರಕ್ಕಾಗಿ ಹುಡುಕಾಟ ಶುರುವಾಯಿತು. ಆಗ ಸ್ನೇಹಿತರು ಬಣ್ಣದ ಬಾಟಲಿ ತಂತ್ರವನ್ನು ಪರಿಚಯಿಸಿದರು. ಅದನ್ನು ಪ್ರಯೋಗಿಸಿದ ಮೇಲೆ ನಮ್ಮ ಮನೆಯ ಬಳಿಯ ನಾಯಿ ಕಾಟ ಸಂಪೂರ್ಣವಾಗಿ ಕಡಿಮೆಯಾಗಿದೆ. ಜನರು ಕುರುಡು ನಂಬಿಕೆ ಎಂದುಕೊಂಡರೂ, ನಮ್ಮ ಸಮಸ್ಯೆಗೆ ಇದು ಪರಿಹಾರ ನೀಡಿದೆ” ಎಂದು ಹೇಳಿದ್ದಾರೆ.
ಕೆಂಪು ಮತ್ತು ಹಳದಿ ಬಣ್ಣದ ಬಾಟಲಿಗಳನ್ನು ನೋಡಿ ನಾಯಿಗಳು ದೂರವಾಗುತ್ತಿವೆ. ಹೀಗಾಗಿ ಮನೆಗಳ ಅಂಗಳಕ್ಕೆ ನುಗ್ಗುವ ಕಾಟ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ. ಈ ವಿಷಯವು ಹಬ್ಬಿ ಹರಡುತ್ತಿದ್ದಂತೆಯೇ ಹೊಂಬಳ, ನಾಗಾವಿ, ಲಿಂಗದಲ್, ಬೆಲದಡಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಜನರು ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ.






