ಕಾಮಿಡಿ ಕಿಲಾಡಿಗಳು ಖ್ಯಾತಿ ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಆದರೆ ಸಿನಿಮಾ ರಿಲೀಸ್ ಹಿಂದಿನ ದಿನವೇ ಜೈಲು ಸೇರಿದ್ದರು. “ಶಿವಣ್ಣ ಇನ್ನು ಕೆಲವೇ ವರ್ಷಗಳಲ್ಲಿ ಸಾಯ್ತಾರೆ, ಆಮೇಲೆ ನಾನೇ ಗಂಡುಗಲಿ” ಎಂದಿದ್ದ ಮನು ಆಡಿಯೋ ವೈರಲ್ ಆಗಿತ್ತು.
ಮನು ಅವರನ್ನ ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಕೂಡ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ಮೇಲೆ ಮಡೆನೂರು ಮನು ನಟರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ, ನನಗೆ ಬದುಕಲು ಅವಕಾಶ ಕೊಡಿ ಎಂದು ಬೇಡಿಕೊಂಡಿದ್ದರು. ಇದಕ್ಕಾಗಿ ಶಿವಣ್ಣನ ಮನೆ ಬಳಿಯೂ ಕುಟುಂಬ ಸಮೇತ ತೆರಳಿ ಕಾದರೂ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಕೊನೆಗೂ ಮನು ಶಿವಣ್ಣ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.
ಶಿವಣ್ಣನನ್ನು ಭೇಟಿಯಾಗಲು ಮನು ಹಲವು ಬಾರಿ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮನು ಆಡಿಯೋ ವೈರಲ್ ಆಗಿದ್ದಕ್ಕೆ ಶಿವಣ್ಣನ ಫ್ಯಾನ್ಸ್ ರೊಚ್ಚಿಗೆದ್ದಿದ್ದರು. ಕನ್ನಡದ ಮೇರು ನಟನ ಸಾವು ಬಯಸಿದ ಮನು ಸರಿಯಾದ ಪಾಠ ಕಲಿಸಬೇಕು ಎಂದು ಆಕ್ರೋಶ ಹೊರಹಾಕಿದ್ರು. ಮನು ಬಹಿರಂಗವಾಗಿ ಕ್ಷಮೆ ಕೇಳಿದ ಕಾರಣ ಅವರ ಮೇಲಿನ ಬ್ಯಾನ್ ಅನ್ನು ಚಿತ್ರರಂಗ ತೆರವು ಮಾಡಿತ್ತು. ಆದರೆ ಶಿವಣ್ಣನನ್ನು ಭೇಟಿಯಾಗಿ ಕಾಲಿಗೆ ಬಿದ್ದೇ ಕ್ಷಮೆ ಕೇಳ್ತೀನಿ ಎಂದು ಮನು ಹೇಳಿದ್ದರು.
ಮೊದಲಿಗೆ ಮನು ಜೊತೆಗೆ ಕೆಲವರು ಹೋಗಿ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದಿದ್ದಕ್ಕೆ, “ನಾನು ಅದನ್ನ ರಿಯಾಕ್ಟ್ ಮಾಡೇ ಇಲ್ವಲ್ರೋ? ಎಂದಿದ್ದಾರೆ. ಯಾರೇ ನನಗೆ ಬೈದರೂ, ಹೊಗಳಿದರೂ, ಉಗುಳಿದರೂ ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಡೋಂಟ್‌ವರೀ ಎಂದು ಶಿವಣ್ಣ ಹೇಳಿದ್ದಾರೆ. ಕಾಲಿಗೆ ಬಿದ್ದ ಮನು ಅವರನ್ನು ಯಾಕಪ್ಪ ಇದೆಲ್ಲ?” ಎಂದು ಶಿವಣ್ಣ ಕೇಳಿದ್ದಾರೆ.
”ಅಣ್ಣ ನಾವು ನಮ್ಮ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರೀರಿಲೀಸ್ ಮಾಡಬೇಕು ಅಂತಿದ್ದೀವಿ. ನೀವು ಒಪ್ಪಿದರೆ ಖಂಡಿತ ಮಾಡ್ತೀವಿ ಅಣ್ಣ ಎಂದು ಮನು ಶಿವಣ್ಣಗೆ ಕೇಳಿಕೊಂಡಿದ್ದಾರೆ. ಅದಕ್ಕೆ ಶಿವಣ್ಣ, ಒಳ್ಳೆಯ ಟೈಟಲ್, ರೀರಿಲೀಸ್ ಮಾಡಿ, ಯಾರೂ ಮೇಲಲ್ಲ, ಕೀಳಲ್ಲ, ಎಲ್ರೂ ಒಂದೇನೆ” ಎಂದು ಶುಭಕೋರಿದ್ದಾರೆ.






