ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದ ಮನೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಜಿಎಫ್, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ , ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅವರು ನಟಿಸಿದ್ದರು.
ಬಣ್ಣದ ಲೋಕದಲ್ಲಿ ದಿನೇಶ್ ಮಂಗಳೂರು ಅವರು ಅಪಾರ ಅನುಭವ ಹೊಂದಿದ್ದರು. ‘ಕಾಂತಾರ’ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು. ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟ ಮಂಗಳೂರು ದಿನೇಶ್ ಮರಣ ಹೊಂದಿದ್ದಾರೆ.
ಮಂಗಳೂರು ದಿನೇಶ್ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವುಂಟಾಗಿದೆ. ‘ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳುರ್ ಇನ್ನಿಲ್ಲ. ಹೋಗಿ ಬಾ ಮಿತ್ರಾ’ ಎಂದು ನಿರ್ದೇಶಕ ಪಿ. ಶೇಷಾದ್ರಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.






