ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಎದುರಾಗುತ್ತಿದ್ದು, ಶನಿವಾರ ಬಂಧಿಸಲಾಗಿರುವ ಮುಸುಕುಧಾರಿ ದೂರುದಾರ ಚಿನ್ನಯ್ಯ ಬುರುಡೆಗಳ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾನೆ. ತಾನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿರುವ ಬುರುಡೆಗಳು ತನ್ನ ಸೂತ್ರಧಾರಿ ಗ್ಯಾಂಗ್ ತನಗೆ ತಂದು ಕೊಟ್ಟಿತ್ತು ಎಂದು ಹೇಳಿಕೆ ನೀಡಿದ್ದಾನೆ.

ಬುರುಡೆ ತಂದುಕೊಟ್ಟ 10ರಿಂದ 12 ಜನರ ಬಂಧನ ಆಗುವ ಸಾಧ್ಯತೆ ಇದೆ. ಚಿನ್ನಯ ಹೆಸರು ಹೇಳಿದವರಿಗೂ ಕೂಡ ಇದೀಗ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ಚಿನ್ನಯ್ಯ ಹಲವರ ಹೆಸರು ಹೇಳಿದ್ದು, ಧರ್ಮಸ್ಥಳದ ಕಾಡಿನಲ್ಲಿ ತಾವೇ ಬುರುಡೆ ಹೂತಿಟ್ಟ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳದ ಅರಣ್ಯವ್ಯಾಪ್ತಿಯಲ್ಲಿ ಬುರುಡೆ ಷಡ್ಯಂತ್ರ ಇರಬಹುದು ಎಂದು ತೋರಿಸಲು ಚಿನ್ನಯ್ಯಗೆ ಸೂಚನೆ ಕೊಡಲಾಗಿತ್ತು. ತಂದಿದ್ದ ಬುರುಡೆ ಅಲ್ಲದೆ ಮತ್ತೊಂದು ಬುರುಡೆ ಇರಿಸಿ ಸಂಚು ರೂಪಿಸಲಾಗಿತ್ತು. ಎಸ್‌ಐಟಿಗೆ ಸ್ಥಳ ತೋರಿಸಲು ಸೂಚನೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
“ಈ ಪ್ರಕರಣದಲ್ಲಿ ತಾನು ಕೇವಲ ಪಾತ್ರಧಾರಿ ಮಾತ್ರ. ಸೂತ್ರಧಾರಿಗಳು ಬೇರೆಯೇ ಇದ್ದಾರೆ. ಅವರ ಅಣತಿಯಂತೆ ನಾನು ಈ ರೀತಿ ಕೆಲಸ ಮಾಡಿದ್ದೇನೆ ಅಷ್ಟೇ. ಇದರಲ್ಲಿ ನನ್ನ ಪಾತ್ರ ಬೇರೇನೂ ಇಲ್ಲ” ಎಂದು ಎಸ್‌ಐಟಿ ಮುಂದೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.
ಶರಣಾಗುವ ಮುನ್ನ ಎರಡು ಬುರುಡೆಗಳನ್ನು ಏಜೆಂಟ್ ಗಳ ಮೂಲಕ ಖರೀದಿಸಲಾಗಿತ್ತು. ಅವೆರೆಡೂ ಸಹ 24 ವರ್ಷದ ಹೆಣ್ಣು ಮಕ್ಕಳ ಶವದ ಬುರುಡೆಗಳೆಂದು ಹೇಳಲಾಗಿತ್ತು. ಆದರೆ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಅದು ಗಂಡಿನ ಬುರುಡೆ ಹಾಗೂ ಈ ವ್ಯಕ್ತಿ 30 ವರ್ಷದ ಹಿಂದೆ ಸಾವನ್ನಪ್ಪಿದ್ದ ಎಂದು ತಿಳಿದಾಗ ನನಗೂ ಸಹ ಶಾಕ್ ಆಗಿತ್ತು ಎಂದು ಚಿನ್ನಯ್ಯ ವಿಶೇಷ ತನಿಖಾ ತಂಡದ ಎದುರು ಹೇಳಿಕೆ ನೀಡಿದ್ದಾನೆ.
ನಾಲ್ಕರಿಂದ ಐದು ಮಂದಿ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಇದುವರೆಗೂ ಚಿನ್ನಯ್ಯ ಯಾರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ ಹಾಗೂ ಪೂರ್ವ ನಿರ್ಧಾರಿತ ಸನ್ನಿವೇಶಗಳನ್ನು ಮರು ಸೃಷ್ಟಿಸಿ ಜನರನ್ನು , ಸರ್ಕಾರವನ್ನು ದಿಕ್ಕು ತಪ್ಪಿಸಿರುವ ಪ್ರಕರಣ ಎಂದು ಎಸ್‌ಐಟಿ ಹೇಳಿದೆ.
ಶನಿವಾರ ಚಿನ್ನಯ್ಯನ ಸೋದರನನ್ನೂ ಸಹ ವಶಕ್ಕೆ ಪಡೆದಿದ್ದ ಎಸ್‌ಐಟಿ ಎಂಟು ತಾಸುಗಳ ಕಾಲ ತೀವ್ರ ವಿಚಾರಣೆ ನಡೆಸಿತ್ತು. ನನ್ನ ಸೋದರ ಧನದಾಹಿಯಾಗಿದ್ದು ಹಣಕ್ಕಾಗಿ ಏನನ್ನೂ ಮಾಡಬಲ್ಲ ವ್ಯಕ್ತಿಯಾಗಿದ್ದಾನೆ ಎಂದು ಚಿನ್ನಯ್ಯನ ಸೋದರ ಹೇಳಿಕೆ ನೀಡಿದ್ದ. ಚಿನ್ನಯ್ಯನ ಬ್ಯಾಂಕ್ ಖಾತೆಯ ಬಗ್ಗೆ ಎಸ್‌ಐಟಿ ಪರಿಶೀಲನೆ ನಡೆಸಿದ್ದು, ಈತನಿಗೆ ಕೆಲವು ದಿನಗಳ ಹಿಂದಷ್ಟೇ ಗಿರೀಶ್ ಮಟ್ಟಣ್ಣವರ್ 2 ಲಕ್ಷ ರೂ. ನೀಡಿದ್ದರೆಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಧರ್ಮಸ್ಥಳದ ವಿರುದ್ದ ನಿರಂತರವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತಾ ಭಟ್ ಮತ್ತಿತರರು ಹಾಗೂ ಪ್ರತಿಯೊಂದು ಪತ್ರಿಕಾಗೋಷ್ಠಿಯಲ್ಲಿಯೂ ಚಿನ್ನಯ್ಯ ಮತ್ತಿತರರಿಗೆ ಬೆನ್ನೆಲುಬಾಗಿ ನಿಂತಿದ್ದ ವಕೀಲರಿಗೆ ಈಗ ಸಂಕಷ್ಟ ಎದುರಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಶನಿವಾರ ಹೈಕೋರ್ಟ್ ನಲ್ಲಿ ಬಿ.ಎಲ್.ಸಂತೋಷ್ ತೇಜೋವಧೆ ಆರೋಪದಲ್ಲಿ ಜಾಮೀನು ಪಡೆದ ನಂತರ ಉಜಿರೆಗೆ ತೆರಳಿದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ಆಕ್ರೋಶದ ಸ್ವಾಗತ ಸಿಕ್ಕಿದೆ. ಸುಜಾತಾ ಭಟ್ ಗೂ ಸಹ ಈಗ ತೀವ್ರ ಸಂಕಷ್ಟ ಎದುರಾಗಿದ್ದು, ಅವರ ಮನೆಯ ಎದುರು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಶೀಘ್ರದಲ್ಲಿಯೇ ಗಿರೀಶ್ ಮಟ್ಟಣ್ಣವರ್ ರನ್ನೂ ಈ ಪ್ರಕರಣದಲ್ಲಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ನಮ್ಮ ಹೋರಾಟಕ್ಕೂ ಸುಜಾತಾ ಭಟ್ ಗೂ ಸಂಬಂಧವಿಲ್ಲ ಎಂದು ನಿನ್ನೆಯಷ್ಟೇ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ನೀಡಿದ್ದಾರೆ.






