ಇತ್ತೀಚಿಗೇ ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚಾಗುತ್ತಿರುವುದಿಂದ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಇನ್ನು ಮೇಲೆ ಚಾಲಕರು ಎರಡು ಸಹ ಅಪಘಾತ ಮಾಡಿದ್ರೆ ಅವರನ್ನ ಕೆಲಸದಿಂದ ವಜಾ ಮಾಡಲಾಗುತ್ತದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಕಳೆದ ಒಂದು ವಾರದಲ್ಲಿ ನಾಲ್ವರು ಬಲಿಯಾಗಿದ್ದಾರೆ. 15 ತಿಂಗಳಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಚಾಲಕರ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯವೇ ಕಾರಣವಾಗಿದೆ.
ಹೊಸ ನಿಯಮ ಇಂದಿನಿಂದಲೇ ಜಾರಿ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ
ಈ ಹೊಸ ನಿಯಮ ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಸಲ ಅಪಘಾತವೆಸಗಿದ್ದರೇ 6 ತಿಂಗಳು ಅಮಾನತು ಮಾಡುತ್ತೇವೆ. ಅಮಾನತು ಅವಧಿ ಮುಗಿದ ಮೇಲೆ ತರಬೇತಿ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಮೊದಲ ಸಲ ಅಪಘಾತವೆಸಗಿದ ಚಾಲಕರಿಗೆ ಮೂರು ಇನ್ಕ್ರಿಮೆಂಟ್ ಕಡಿತಗೊಳಿಸಲಾಗುತ್ತದೆ. ಎರಡನೇ ಸಲ ಅಪಘಾತವೆಸಗಿದರೆ ಬಿಎಂಟಿಸಿ ಸಂಸ್ಥೆಯಿಂದಲೇ ವಜಾ ಮಾಡಲಾಗುತ್ತದೆ ಎಂದರು.
ಈ ಕುರಿತಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಪ್ರಧಾನ ಗುರಿಯಾಗಿ ಸಂಸ್ಥೆ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ವಿವರವನ್ನು ಪ್ರಕಟಿಸಿದೆ.
ಆಗಸ್ಟ್ 2025ರಲ್ಲಿ ಒಟ್ಟು 04 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಒಂದು ವಿದ್ಯುತ್ಚಾಲಿತ ಬಸ್ಸಿಗೆ ಸಂಬಂಧಿಸಿದೆ. ಪರಿಶೀಲನೆಯ ಪ್ರಕಾರ, 03 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಕೇವಲ 01 ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಹಾಗೂ ವಿದ್ಯುತ್ ಬಸ್ ಚಾಲಕರ ನಿರ್ವಹಣಾ ತಪ್ಪು ಕಾರಣವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ದ್ವಿಚಕ್ರ ವಾಹನ ಸವಾರರು ಬಸ್ಸನ್ನು ಅತಿಕ್ರಮಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ತಾಕುವುದು ಮುಖ್ಯ ಕಾರಣವೆಂದು ವರದಿ ತಿಳಿಸಿದೆ.
ಡಿಸೆಂಬರ್ 2023ರಿಂದ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಿಎಂಟಿಸಿ ಚಾಲಕರಿಗೆ ಸುರಕ್ಷಾ ಚಾಲನಾ ತರಬೇತಿ ನೀಡಲಾಗುತ್ತಿದೆ. ಜುಲೈ 2025ರವರೆಗೆ 11,835 ಚಾಲಕರು ತರಬೇತಿಗೊಳಗಾಗಿದ್ದಾರೆ. ಟ್ರಾಫಿಕ್ ಕಮಾಂಡ್ ಸೆಂಟರ್ನಲ್ಲಿ ಅಪಘಾತ ಮತ್ತು ಉಲ್ಲಂಘನೆಗಳ ವೀಡಿಯೋ ತುಣುಕುಗಳನ್ನು ತೋರಿಸಿ ಚಾಲಕರಲ್ಲಿ ಅರಿವು ಮೂಡಿಸಲಾಗಿದೆ. ವಿದ್ಯುತ್ಚಾಲಿತ ಬಸ್ ಚಾಲಕರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದ್ದು, 1,187 ಚಾಲಕರು ಇದುವರೆಗೆ ಪಾಲ್ಗೊಂಡಿದ್ದಾರೆ.
ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಗಿದೆ. ಪ್ರತಿ ವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ. ಜನವರಿ 24ರಂದು ಚಾಲಕರ ದಿನಾಚರಣೆ, ಸುರಕ್ಷಿತ ಚಾಲನೆ ಮಾಡಿದವರಿಗೆ ಗೌರವ.
ಚಾಲಕರ ಒತ್ತಡ ಕಡಿಮೆ ಮಾಡಲು, 2,000 ಅನುಸೂಚಿಗಳಲ್ಲಿ ಸಮಯವನ್ನು ಪರಿಷ್ಕರಿಸಿ ರನ್ನಿಂಗ್ ಟೈಮ್ ಹೆಚ್ಚಿಸಲಾಗಿದೆ. ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ. ಕರ್ತವ್ಯದ ವೇಳೆ ಮೊಬೈಲ್ ಬಳಕೆ ಪತ್ತೆಯಾದರೆ, ಚಾಲಕರಿಗೆ 15 ದಿನಗಳ ಅಮಾನತ್ತು ಹಾಗೂ ಘಟಕ ವರ್ಗಾವಣೆ ಕ್ರಮ ಜಾರಿಯಲ್ಲಿ. ಘಟಕ ಪ್ರವೇಶ ದ್ವಾರದಲ್ಲೇ ಮದ್ಯಪಾನ ತಪಾಸಣೆ, ಮದ್ಯಪಾನಿತ ಚಾಲಕರಿಗೆ ಕರ್ತವ್ಯ ನಿರಾಕರಣೆ.
ಮೊದಲ ಮಾರಣಾಂತಿಕ ಅಪಘಾತಕ್ಕೆ ಅಮಾನತ್ತು ಹಾಗೂ ಎರಡು ವಾರ್ಷಿಕ ವೇತನ ಇಳಿಕೆ. ಎರಡನೇ ಅಪಘಾತಕ್ಕೆ ಸೇವೆಯಿಂದ ವಜಾ. ಕಳೆದ ಒಂದು ವರ್ಷದಲ್ಲಿ ನಡೆದ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಅಪಘಾತಕ್ಕೆ ಕಾರಣವಾದ ಹಾಗೂ ದುರುಳ ನಡವಳಿಕೆಯನ್ನು ತೋರಿದ ಚಾಲಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಡ್ಡಾಯ.
ಬಿಎಂಟಿಸಿ ಸಂಸ್ಥೆಯು ದ್ವಿಚಕ್ರ ವಾಹನ ಸವಾರರು ಹಾಗೂ ಪ್ರಯಾಣಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ. ಭಾರಿ ವಾಹನಗಳ ನಡುವೆ ನಿರ್ಲಕ್ಷ್ಯದಿಂದ ಚಲಿಸುವುದನ್ನು ತಪ್ಪಿಸಿ, ಬಸ್ ಹಿಂದಿಕ್ಕುವಾಗ ಎಡಭಾಗದಿಂದ ಮೀರಬಾರದು ಎಂಬುದಾಗಿ ಬಿಎಂಟಿಸಿ ಸಂಸ್ಥೆ ತಿಳಿಸಿದೆ.






