ಜನ್ ಸುನಾಯಿ ಅಂದರೆ ಜನ ಸ್ಪಂದನ ಕಾರ್ಯಕ್ರಮ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ಬುಧವಾರ ಅವರಿಗೆ ಕಪಾಳಮೋಕ್ಷ ಮಾಡಿದ್ದ (Delhi Chief Minister Rekha Gupta was slapped) ಎಂದು ಪೊಲೀಸರು ತಿಳಿಸಿದ್ದಾರೆ. 30 ರ ಹರೆಯದ ವ್ಯಕ್ತಿ ಎಂದು ಹೇಳಲಾಗುವ ಆ ವ್ಯಕ್ತಿ ಕೆಲವು ಕಾಗದಪತ್ರಗಳೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದ. ಈ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.
ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ ಬುಧವಾರ ಸಾಪ್ತಾಹಿಕ ‘ಜನ್ ಸುನಾಯಿ’ ಕಾರ್ಯಕ್ರಮದ ವೇಳೆ ಈ ದಾಳಿ ನಡೆದಿದೆ.
ಮುಖ್ಯಮಂತ್ರಿಗಳಿಗೆ ದಾಖಲೆ ನೀಡಿದ ಬೆನ್ನಲ್ಲಿಯೇ ಅವರ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಆರೋಪಿಯು ಮೊದಲು ದಾಖಲೆಗಳನ್ನು ರೇಖಾ ಗುಪ್ತಾ ಅವರಿಗೆ ಹಸ್ತಾಂತರ ಮಾಡಿದ್ದ. ಅವರ ಮೇಲೆ ಹಲ್ಲೆ ಮಾಡುವ ಮೊದಲು ಕಿರುಚಲು ಪ್ರಾರಂಭ ಮಾಡಿದ್ದ ಎನ್ನಲಾಗಿದೆ. ತಕ್ಷಣವೇ ಆತನನ್ನು ಹಿಡಿದು ವಶಕ್ಕೆ ಪಡೆಯಲಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಉಪ ಪೊಲೀಸ್ ಆಯುಕ್ತರು ಮುಖ್ಯಮಂತ್ರಿಯವರ ನಿವಾಸಕ್ಕೆ ತಲುಪಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಕುಂದುಕೊರತೆ ಸಭೆ ವೇಳೆ ಸಿಎಂ ನಿವಾಸದಲ್ಲಿಯೇ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ದೆಹಲಿ ಪೊಲೀಸ್ ವಶಕ್ಕೆ ಪಡೆದಿದೆ. ಇನ್ನು ಸಿಎಂ ಮೇಲಿನ ದಾಳಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಹಲ್ಲೆಕೋರನ ಹಿಂದೆ ರಾಜಕಾರಣ ಇರಬೇಕು ಎಂದು ಬಿಜೆಪಿ ಆರೋಪಿಸಿದೆ. ಸಿಎಂ ಮನೆಯಲ್ಲೇ ಭದ್ರತಾ ವೈಫಲ್ಯದ ಬಗ್ಗೆ ತೀವ್ರ ಚರ್ಚೆಯಾಗಿದೆ. ಬಂಧಿತ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಈ ನಿಟ್ಟಿನಲ್ಲಿ ಭಾರೀ ವಿಚಾರಣೆಗೆ ಒಳಪಡಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕ ಹರೀಶ್ ಖುರಾನಾ, “ಸಭೆಯಲ್ಲಿದ್ದ ಒಬ್ಬ ವ್ಯಕ್ತಿ ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ವೈದ್ಯರು ಮುಖ್ಯಮಂತ್ರಿಯನ್ನು ಪರೀಕ್ಷಿಸುತ್ತಿದ್ದಾರೆ. ನಾವು ದಾಳಿಯನ್ನು ಖಂಡಿಸುತ್ತೇವೆ. ಈ ದಾಳಿ ರಾಜಕೀಯ ಪ್ರೇರಿತವಾಗಿದೆಯೇ ಎಂದು ತನಿಖೆ ಮಾಡಬೇಕು” ಎಂದು ಹೇಳಿದರು. ದಾಳಿಕೋರ ಮುಖ್ಯಮಂತ್ರಿಯ ಮೇಲೆ ಕಪಾಳಮೋಕ್ಷ ಮಾಡಿ ಅವರ ಕೂದಲನ್ನು ಎಳೆದಿದ್ದಾನೆ ಎನ್ನಲಾಗಿದೆ.ದಾಳಿಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಬಿಜೆಪಿ ಶಂಕಿಸಿದೆ.
ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಮುಖ್ಯಮಂತ್ರಿಯವರ ಕೆಲಸವನ್ನು ಪ್ರತಿಸ್ಪರ್ಧಿಗಳು ಸಹಿಸುವುದಿಲ್ಲ ಮತ್ತು ದಾಳಿಕೋರನ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಅವರ ನಿವಾಸಕ್ಕೆ ದೌಡಾಯಿಸಿ ಆವರಣವನ್ನು ಭದ್ರಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಈ ದಾಳಿಯನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ ಎಂದು ಹೇಳಿದ್ದಾರೆ. “ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಸ್ಥಳವಿದೆ, ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ. ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಆಶಿಸುತ್ತೇವೆ,” ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯೂ ಆಗಿರುವ ಅತಿಶಿ ಹೇಳಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಈ ದೊಡ್ಡ ಭದ್ರತಾ ಉಲ್ಲಂಘನೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತದೆ. ದೆಹಲಿ ಪೊಲೀಸ್ ಆಯುಕ್ತ ಎಸ್‌ಬಿಕೆ ಸಿಂಗ್ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಶೂ ಎಸೆಯಲಾಗಿತ್ತು. ಇದೀಗ ರೇಖಾ ಗುಪ್ತಾ ಅವರ ಕಪಾಳಕ್ಕೆ ಬಾರಿಸಲಾಗಿದೆ. ದೆಹಲಿಯಲ್ಲಿ ಮುಖ್ಯಮಂತ್ರಿಗಳಿಗೇ ರಕ್ಷಣೆ ಎನ್ನುವುದು ಇಲ್ಲವೇ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಏನಿದು ಘಟನೆ ಎನ್ನುವ ಸಂಪೂರ್ಣ ವಿವರ ನೋಡೋಣ.
ದೆಹಲಿಯ ನೂತನ ಹಾಗೂ ಮೊದಲ ಬಾರಿ ಶಾಸಕಿ ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಅವರು ಆಡಳಿತಕ್ಕೇರಿದ ಕೆಲವೇ ದಿನಗಳಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಜನಾಕ್ರೋಶ ಅಥವಾ ಆಡಳಿತ ವಿರೋಧಿ ಅಲೆ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವ್ಯಕ್ತಿಯೊಬ್ಬ ರೇಖಾ ಗುಪ್ತಾ ಅವರ ಕಪಾಳಮೋಕ್ಷ ಮಾಡಿದ್ದಾನೆ.






