ರೀಲ್ಸ್ ಮತ್ತು ಫೋಟೋಶೂಟ್ ಮಾಡಲು ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಜಿ–ಸ್ಕ್ವೇರ್ ಲೇಔಟ್ನ ಮಾಡೆಲ್ ಹೌಸ್ಗೆ ಆಗಾಗ ಭೇಟಿ ನೀಡುತ್ತಿದ್ದ ಕೆಲ ಯುವಕರು ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಇದನ್ನು ಓದಿ: ಬೆಳಗಾವಿ ಚೋರ್ಲಾ ಘಾಟ್ನಲ್ಲಿ 1000 ಕೋಟಿ ರೂ. ಕಂಟೇನರ್ ದರೋಡೆ: 4 ಮಂದಿ ಬಂಧನ
ಶನಿವಾರ ಬೆಳಿಗ್ಗೆ ಬೆಂಕಿಗೆ ಆಹುತಿಯಾದ ಮನೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಾಗಿದ್ದಾರೆ ಎಂದು ಹೇಳಿದರು. ಇವರಲ್ಲಿ ಕೆಲವರು ಶಾಲಾ–ಕಾಲೇಜು ವಿದ್ಯಾರ್ಥಿಗಳಾಗಿದ್ದು, ಮತ್ತೆ ಕೆಲವರು ಶಾಲೆ ಬಿಟ್ಟವರು. ಉಳಿದ ಇಬ್ಬರು ಮುಂಬೈನಿಂದ ಬಂದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಧಿತರ ಮೊಬೈಲ್ ಫೋನ್ ಪರಿಶೀಲನೆಯಿಂದ ರೀಲ್ಸ್ ಹಾಗೂ ಫೋಟೋಶೂಟ್ ಮಾಡುವ ಉದ್ದೇಶದಿಂದ ಹುಡುಗರ ಗುಂಪು ಈ ಮನೆಗೆ ಆಗಾಗ ಬರುತ್ತಿದ್ದುದಾಗಿ ತಿಳಿದುಬಂದಿದೆ. ಮನೆ ಒಳಗೆ ಸಿಗರೇಟ್ ತುಣುಕುಗಳು, ಬೆಂಕಿಪೊಟ್ಟಣಗಳು ಪತ್ತೆಯಾಗಿವೆ. ಗುಂಪಿನಲ್ಲಿದ್ದ ಒಬ್ಬ ಬಾಲಕ ಮನೆಯಲ್ಲಿದ್ದ ವಸ್ತುವೊಂದಕ್ಕೆ ಬೆಂಕಿ ಹಚ್ಚಿದ್ದಾನೆ. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದೇ ಇಡೀ ಮನೆಗೆ ವ್ಯಾಪಿಸಿದೆ ಎಂದು ಎಸ್ಪಿ ವಿವರಿಸಿದರು.
ಬೆಂಕಿ ಹಚ್ಚಿದ ಉದ್ದೇಶ ಇನ್ನೂ ಸ್ಪಷ್ಟವಿಲ್ಲ
ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿದ ಹಿಂದಿನ ನಿಖರ ಉದ್ದೇಶ ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕಿಲ್ಲ. ದೂರಿನಲ್ಲಿ ಉಲ್ಲೇಖಿಸಿರುವ ವಸ್ತುಗಳು ಸದ್ಯಕ್ಕೆ ಮನೆಯಲ್ಲಿ ಪತ್ತೆಯಾಗಿಲ್ಲ. ಅವುಗಳನ್ನು ಹಿಂದೆಯೇ ಕದ್ದೊಯ್ಯುವ ಸಾಧ್ಯತೆ ಇದೆ ಎಂದು ಎಸ್ಪಿ ಹೇಳಿದರು.
ಘಟನಾ ಸ್ಥಳದ ಲೇಔಟ್ನಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಅಥವಾ ಸಿಸಿಟಿವಿ ಕ್ಯಾಮೆರಾಗಳಿರಲಿಲ್ಲ. ಇಂತಹ ವ್ಯವಸ್ಥೆ ಮಾಡಿಕೊಳ್ಳುವುದು ಆಸ್ತಿಯ ಮಾಲೀಕರ ಜವಾಬ್ದಾರಿ. ನಗರ ಹೊರವಲಯದ ಲೇಔಟ್ಗಳಲ್ಲಿ ಅನೈತಿಕ ಚಟುವಟಿಕೆಗಳ ಕುರಿತು ಮಾಹಿತಿ ಬಂದಿರುವುದರಿಂದ ರಾತ್ರಿ ಗಸ್ತು ಮತ್ತು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.
ಶಾಸಕ ಭರತ್ ರೆಡ್ಡಿ ಕೈವಾಡದ ಆರೋಪ
ಈ ಘಟನೆಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, “ರೀಲ್ಸ್ ಮಾಡುವ ಹುಡುಗರು ಬೆಂಕಿ ಹಚ್ಚಿದ್ದಾರೆ ಎನ್ನುವುದು ನಂಬಲು ಸಾಧ್ಯವಿಲ್ಲ. ರೀಲ್ಸ್ ಮಾಡುವವರು ಏಕೆ ಬೆಂಕಿ ಹಚ್ಚುತ್ತಾರೆ?” ಎಂದು ಪ್ರಶ್ನಿಸಿದರು.
ಮಾಡೆಲ್ ಹೌಸ್ಗೆ ಭದ್ರತೆ ನಿಯೋಜಿಸಲಾಗಿತ್ತು ಎಂದ ಅವರು, ಕಳೆದ ಆಗಸ್ಟ್ನಲ್ಲಿ ಗೇಟ್ ಮುರಿದು ಕಳ್ಳತನ ನಡೆದಿದ್ದು, ಈ ಸಂಬಂಧ ಗ್ರಾಮೀಣ ಠಾಣೆಗೆ ದೂರು ನೀಡಲಾಗಿತ್ತು ಎಂದು ಹೇಳಿದರು. ಆಗ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಶಾಸಕ ಭರತ್ ರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರು ಸಿಪಿಐ ಸತೀಶ್ ಮೇಲೆ ಒತ್ತಡ ಹೇರಿ ಆರೋಪಿಗಳನ್ನು ಬಿಡುಗಡೆ ಮಾಡಿಸಿದರು ಎಂದು ಗಂಭೀರ ಆರೋಪ ಮಾಡಿದರು.
ಜಿ–ಸ್ಕ್ವೇರ್ ಲೇಔಟ್ ಮೇಲೆ ಭರತ್ ರೆಡ್ಡಿ ಕಣ್ಣು ಹಾಕಿದ್ದು, ಶುಕ್ರವಾರ ರಾತ್ರಿ ನಡೆದ ಬೆಂಕಿ ಅವಘಡದ ಹಿಂದೆ ಅವರ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ದೂರಿದರು.
ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣದಲ್ಲೂ ಆರೋಪಿಗಳಾದ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿಯನ್ನು ಇನ್ನೂ ಬಂಧಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜಕ್ಕೂ ಪ್ರಾಮಾಣಿಕರಾಗಿದ್ದರೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.






