ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ದೊಡ್ಡ ದುರ್ಘಟನೆಯನ್ನುಂಟು ಮಾಡಿದೆ. ಜಗಳ ತೀವ್ರಗೊಂಡ ಪರಿಣಾಮ, ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆಯನ್ನೇ ಕಳೆದುಕೊಳ್ಳುವಂತಹ ಘಟನೆ ನಡೆದಿದೆ. ಈ ಘಟನೆಯಿಂದ ಗ್ರಾಮದ ಶಿಕ್ಷಣ ವಾತಾವರಣದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಭೀಮಪ್ಪ ಮತ್ತು 5ನೇ ತರಗತಿಯ ಸಮರ್ಥ ನಡುವೆ ಪೆನ್ನಿನ ವಿಚಾರವಾಗಿ ವಾಗ್ವಾದ ಉಂಟಾಯಿತು. ಈ ವೇಳೆ ಭೀಮಪ್ಪ ಕಟ್ಟಿಗೆಯಿಂದ ಹೊಡೆದು ಸಮರ್ಥನ ಬಲ ಕಣ್ಣಿಗೆ ಗಾಯಗೊಳಿಸಿದ ಪರಿಣಾಮ, ಸಮರ್ಥನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದೀಗ ವೈದ್ಯರು ಅವನ ಕಣ್ಣುಗುಡ್ಡೆಯನ್ನು ತೆಗೆದುಹಾಕಿದ್ದಾರೆ.
ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ ನಡೆದ ಘಟನೆ ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣ ಜಗಳದಿಂದ ದೊಡ್ಡ ದುರಂತವಾಗಿ ತಿರುಗಿದೆ. ಒಂದನೇ ತರಗತಿಯ ಭೀಮಪ್ಪ ಲೋಕುರೆ ತನ್ನ ಬಳಿಯಿದ್ದ ಪೆನ್ನನ್ನು ಐದನೇ ತರಗತಿಯ ಸಮರ್ಥನಿಗೆ ನೀಡಿದ್ದನು. ನಂತರ ಪೆನ್ ವಾಪಸ್ ಕೇಳಿದಾಗ ಇಬ್ಬರ ನಡುವೆ ವಾಕ್ವಾದ ಉಂಟಾಗಿ ಜಗಳ ತೀವ್ರಗೊಂಡಿದೆ. ಈ ವೇಳೆ ಭೀಮಪ್ಪ ಕಟ್ಟಿಗೆಯಿಂದ ಸಮರ್ಥನ ಬಲ ಕಣ್ಣಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಸಮರ್ಥನನ್ನು ತಕ್ಷಣವೇ ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಣ್ಣಿಗೆ ತೀವ್ರ ಹಾನಿಯಾದ ಕಾರಣ ವೈದ್ಯರು ಕಣ್ಣುಗುಡ್ಡೆಯನ್ನೇ ತೆಗೆದುಹಾಕಬೇಕಾಯಿತು. ಮಗನ ಕಣ್ಣು ಕಳೆದುಕೊಂಡ ಸ್ಥಿತಿ ನೋಡಿ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.
ಘಟನೆ ಸಂಬಂಧಿಸಿ ವಿದ್ಯಾರ್ಥಿಗಳ ಪೋಷಕರು ವಿಷಯವನ್ನು ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ ಮತ್ತು ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ತಿಳಿಸಿದರೂ, ಶಿಕ್ಷಕರು ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಕಣ್ಣು ಕಳೆದುಕೊಂಡ ವಿದ್ಯಾರ್ಥಿಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಇದೀಗ ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ವಿರುದ್ಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಮಖಂಡಿ ಎಸಿ ಶ್ವೇತಾ ಬೀಡಿಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.






