ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದ ವೇಳೆ ಚಿನ್ನ ಪತ್ತೆಯಾಗಿದೆ. ಲಕ್ಕುಂಡಿ ಗ್ರಾಮದಲ್ಲಿ ನಿನ್ನೆ ಕಟ್ಟಡ ಕಾರ್ಮಿಕರು ಅಗೆತ ನಡೆಸುವಾಗ ತಾಮ್ರದ ಪಾತ್ರೆಯೊಳಗೆ ಬಂಗಾರದ ಆಭರಣಗಳು ಸಿಕ್ಕಿವೆ. ಹಾರ ಮತ್ತು ಕಿವಿಯೋಲೆಗಳು ಸೇರಿದಂತೆ ವಿವಿಧ ಆಭರಣಗಳನ್ನು ಒಳಗೊಂಡು ಒಟ್ಟು 470 ಗ್ರಾಂ ಚಿನ್ನವನ್ನು ಸರ್ಕಾರ ವಶಕ್ಕೆ ಪಡೆದಿದೆ.
ಇದನ್ನು ಓದಿ: ತಾಯಿ ಮೇಲಿನ ದ್ವೇಷಕ್ಕೆ ವೈಟ್ಫೀಲ್ಡ್ನಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಬಳಿಕ ಕತ್ತು ಹಿಸುಕಿ ಕೊಲೆ; ಆರೋಪಿಯ ಬಂಧನ..!
ಈ ಆಭರಣಗಳನ್ನು ಎಂಟನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ವಿಕ್ ಗುರುತಿಸಿದ್ದು, ಯಾವುದೇ ಲಾಲಸೆಯಿಲ್ಲದೆ ಪ್ರಾಮಾಣಿಕವಾಗಿ ತನ್ನ ತಾಯಿಯೊಂದಿಗೆ ಗ್ರಾಮ ಹಿರಿಯರಿಗೆ ವಿಷಯವನ್ನು ತಿಳಿಸಿದ್ದಾನೆ. ಮಾಹಿತಿ ಪಡೆದ ತಕ್ಷಣವೇ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೌಲ್ಯಮಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಮ್ರದ ಪಾತ್ರೆಯಲ್ಲಿ ಒಟ್ಟು 22 ವಸ್ತುಗಳು ಇದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಇಲಾಖೆಯವರು ಪಂಚನಾಮೆ ಕ್ರಮ ಜರುಗಿಸಿ ಪತ್ತೆಯಾದ ಬಂಗಾರದ ಆಭರಣಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ತಾಯಿ–ಮಗನ ಈ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾ ಆಡಳಿತ, ಅವರನ್ನು ಸನ್ಮಾನಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಅಬಕಾರಿ ಜಿಲ್ಲಾಧಿಕಾರಿ ಶ್ರೀ ದುರ್ಗೇಶ್ ಅವರು ಪ್ರಜ್ವಲ್ಗೆ ಶಾಲು ಹಾಕಿ ಗೌರವಿಸಿದ್ದು, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ಗ್ರಾಮ ಪಂಚಾಯತ್ ಸದಸ್ಯೆ
ರಜಿಯಾ ಬೇಗಂ ಅವರಿಗೂ ಸನ್ಮಾನಿಸಲಾಗಿದೆ.






