ಗಂಡ–ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತು ಒಮ್ಮೆ ಸತ್ಯವಾಗಿತ್ತು. ಅಂದಿನ ಕಾಲದಲ್ಲಿ ಎಷ್ಟೇ ಕಲಹ, ಭಿನ್ನಾಭಿಪ್ರಾಯಗಳು ಅಥವಾ ದೊಡ್ಡ ಸಮಸ್ಯೆಗಳಿದ್ದರೂ ಸಹ ದಾಂಪತ್ಯ ಜೀವನವನ್ನು ಹೇಗೋ ಮುಂದುವರೆಸಿಕೊಳ್ಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಸಣ್ಣ ವಿಚಾರಗಳೇ ದೊಡ್ಡ ದುರಂತಗಳಿಗೆ ಕಾರಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಇದನ್ನು ಓದಿ: ಹಾಸಿಗೆಯಲ್ಲಿ ಮೂತ್ರ ಮಾಡಿದ ಕಾರಣಕ್ಕೆ 5 ವರ್ಷದ ಬಾಲಕಿ ಗುಪ್ತಾಂಗ ಸುಟ್ಟ ಮಲತಾಯಿ…!
ಇತ್ತೀಚೆಗೆ ಕೇವಲ 200 ರೂಪಾಯಿ ಖರ್ಚಿನ ವಿಚಾರ ಗಂಡ–ಹೆಂಡತಿ ನಡುವಿನ ಜಗಳಕ್ಕೆ ಕಾರಣವಾಗಿ, ಒಂದು ಜೀವವೇ ಬಲಿಯಾದ ಘಟನೆ ನಡೆದಿದೆ. ಪತಿಯ ಜೊತೆ ನಡೆದ ಕಲಹದಿಂದ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರ್ಘಟನೆಯಿಂದಾಗಿ ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿ ಉಳಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸುಮಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾ ಅವರು ಸುಮಾರು 10 ವರ್ಷಗಳ ಹಿಂದೆ ಚಂದ್ರಶೇಖರ್ ಎಂಬುವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು ಇದ್ದರು. ಇಷ್ಟರವರೆಗೆ ಸುಖಸಂಸಾರ ನಡೆಸಿಕೊಂಡು ಬರುತ್ತಿದ್ದರು.
ಆದರೆ ಇತ್ತೀಚೆಗೆ 200 ರೂಪಾಯಿ ಖರ್ಚಿನ ವಿಚಾರಕ್ಕೆ ಸುಮಾ ಹಾಗೂ ಪತಿ ಚಂದ್ರಶೇಖರ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಗಲಾಟೆಯೇ ಸುಮಾರ ಆತ್ಮಹತ್ಯೆಗೆ ಕಾರಣವಾಗಿದೆ. ತಾಯಿಯ ಈ ಅಕಾಲಿಕ ನಿರ್ಧಾರದಿಂದ ಎರಡು ಪುಟ್ಟ ಕಂದಮ್ಮಗಳು ತಬ್ಬಲಿಗಳಾಗಿ ಉಳಿದಿವೆ.
ಮೃತ ಸುಮಾ ಅವರು ಸ್ವಸಹಾಯ ಸಂಘದ ಕಂತು ಪಾವತಿಗಾಗಿ ಹಣವನ್ನು ಸಂಗ್ರಹಿಸಿಕೊಂಡಿದ್ದರು. ಪತಿಗೆ ತಿಳಿಯದಂತೆ ಮನೆಯಲ್ಲೇ 1,300 ರೂಪಾಯಿಯನ್ನು ಇಟ್ಟುಕೊಂಡಿದ್ದರು. ಈ ಹಣದಲ್ಲಿಂದ ಪತಿ ಚಂದ್ರಶೇಖರ್ ಯಾವುದೇ ಮಾಹಿತಿ ನೀಡದೇ 200 ರೂಪಾಯಿಯನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ವಿಚಾರ ಗೊತ್ತಾದ ಬಳಿಕ ದಂಪತಿಗಳ ನಡುವೆ ಜಗಳ ಉಂಟಾಗಿದೆ. ಗಲಾಟೆಯ ನಂತರ ಪತಿ ಚಂದ್ರಶೇಖರ್ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಒಂಟಿಯಾಗಿದ್ದ ಸುಮಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಧ್ಯಾಹ್ನ ಊಟಕ್ಕಾಗಿ ಮನೆಗೆ ಮರಳಿದ ಪತಿ, ಪತ್ನಿಯ ಸ್ಥಿತಿಯನ್ನು ಕಂಡು ಬೆಚ್ಚಿಬಿದ್ದು, ಮೃತದೇಹದ ಮುಂದೆ ಕಣ್ಣೀರಿಟ್ಟು ಅಳಾಡಿದ್ದಾರೆ. ಈ ಸಂಬಂಧ ನೆಲಮಂಗಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






