ಹುಬ್ಬಳ್ಳಿಯಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಒಗ್ಗಟ್ಟಿನ ಸಂದೇಶ ನೀಡುವ ಉದ್ದೇಶದಿಂದ ನಡೆದಿದ್ದರೂ, ವೇದಿಕೆಯಲ್ಲಿಯೇ ಗೊಂದಲ ಮಿಂಚಿತು. ಜಾತಿ ಸಮೀಕ್ಷೆ ಮತ್ತು ಪ್ರತ್ಯೇಕ ಧರ್ಮದ ವಿಷಯದಲ್ಲಿ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸ್ಪಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ವಿಜೃಂಭಣೆಯಿಂದ ನಡೆದ ವೀರಶೈವ–ಲಿಂಗಾಯತ ಏಕತಾ ಸಮಾವೇಶವು ವೈವಿಧ್ಯಮಯ ಬಣ್ಣಗಳನ್ನು ತಳೆದಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಏಕತೆ, ಒಗ್ಗಟ್ಟು, ಪ್ರತ್ಯೇಕ ಧರ್ಮದ ಮಾನ್ಯತೆ, ಜಾತಿ ಸಮೀಕ್ಷೆ ಹಾಗೂ ಸಮಾಜದ ಹಲವು ವಿಚಾರಗಳ ಬಗ್ಗೆ ಮುಖಂಡರು ಮತ್ತು ಮಠಾಧೀಶರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಆದರೆ ಸಭೆಯ ಮಧ್ಯೆ ವೇದಿಕೆಯ ಮೇಲೂ, ಪ್ರೇಕ್ಷಕರ ಮಧ್ಯೆಯೂ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಹಾರಾಷ್ಟ್ರದ ಶಿವ ಸಂಘಟನೆಯ ಪ್ರತಿನಿಧಿಯೊಬ್ಬರ ಮಾತಿಗೆ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಎದ್ದು ನಿಂತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರದಿಂದ ಬಂದ ನಾಯಕರು ತಮ್ಮ ಭಾಷಣದಲ್ಲಿ “ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದಲ್ಲ, ವೀರಶೈವ–ಲಿಂಗಾಯತ ಎಂದು ಬರೆಯಬೇಕು” ಎಂದು ಕರೆ ನೀಡಿದರು. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನೂ ಪ್ರಸ್ತಾಪಿಸಿ, “ಹಿಂದುತ್ವ ಪ್ರತಿಪಾದಿಸುವ ಅಮಿತ್ ಶಾ ಅವರ ಧರ್ಮವೂ ಬೇರೆ” ಎಂದು ಹೇಳಿದರು.
ಈ ಮಾತಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮಗೆ ಶಿಷ್ಟಾಚಾರ ಹೇಳಿದ್ದಿರಿ, ಆದರೆ ಈಗ ನೀವು ಅದನ್ನೇ ಉಲ್ಲಂಘಿಸಿದ್ದೀರಿ. ನಾವು ಮಾತನಾಡಲು ಆರಂಭಿಸಿದರೆ ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ” ಎಂದು ವೇದಿಕೆಯಲ್ಲಿ ಎದ್ದು ಹೇಳಿದರು. ಬೊಮ್ಮಾಯಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಬ್ಬರೂ ಆಕ್ರೋಶದಿಂದ ವೇದಿಕೆಯಿಂದ ಹೊರಡುವ ಸ್ಥಿತಿಗೆ ಬಂದರು.
ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, “ಈ ಸಮಾವೇಶ ಪುನರುತ್ಥಾನದ ಹೆಜ್ಜೆ. ನಮ್ಮ ಮಹಾಸಭೆಯ ಪ್ರಮುಖ ಗುರಿ ಎಂದರೆ 57 ಜಾತಿಗಳಿಗೆ ಸಮರ್ಪಕ ಮೀಸಲಾತಿ ಒದಗಿಸುವುದು. ಕೆಲವರಿಗೆ ಲಭಿಸಬೇಕಾಗಿದ್ದ 2ಎ ಹಕ್ಕುಗಳನ್ನು ಕೂಡ ನಮ್ಮ ಹೋರಾಟದ ಮೂಲಕ ಸಾಧಿಸಬಹುದು. ಒಗ್ಗಟ್ಟಿನಲ್ಲಿ ಶಕ್ತಿ ಇದೆ, ಆದರೆ ಒಡಕಾದರೆ ನಾಶವಷ್ಟೇ. ಆದ್ದರಿಂದ ಎಲ್ಲರೂ ಒಂದಾಗಿ ಸಾಗುವುದು ಅತ್ಯವಶ್ಯಕ” ಎಂದು ಒತ್ತಿ ಹೇಳಿದರು.
ಇದೇ ವೇಳೆ, ಮಹಾರಾಷ್ಟ್ರದ ಶಿವ ಸಂಘಟನೆಯ ಕಾರ್ಯಕರ್ತರು ತಮ್ಮ ಅಧ್ಯಕ್ಷ ಮನೋಹರ್ ದೊಂಡೆ ಅವರಿಗೆ ವೇದಿಕೆಯ ಮುಂದಿನ ಸಾಲಿನಲ್ಲಿ ಸ್ಥಾನ ನೀಡದಿದ್ದುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶಗೊಂಡ ಅವರು, ವೇದಿಕೆಯ ಕೆಳಗೆ ನಿಂತು ಸಂಘಟಕರ ವಿರುದ್ಧ ಕಿಡಿಕಾರಿದರು. ಕೊನೆಯಲ್ಲಿ, ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿದ ನಂತರವೇ ಪರಿಸ್ಥಿತಿ ಶಾಂತಗೊಂಡಿತು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಭಾಷಣದಲ್ಲಿ, “ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ. ವೀರಶೈವ-ಲಿಂಗಾಯತ ಎರಡೂ ಒಂದೇ. ಇನ್ನೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಜಾತಿ ಸಮೀಕ್ಷೆ ಪಾರದರ್ಶಕವಾಗಿರಬೇಕು” ಎಂದರು. ಆದರೆ ಅವರ ಮಾತಿಗೆ ದಿಂಗಾಲೇಶ್ವರ ಶ್ರೀ ಅತೃಪ್ತಿ ವ್ಯಕ್ತಪಡಿಸಿದರು. “ಇದು ಏಕತಾ ಸಮಾವೇಶ. ಇಲ್ಲಿ ಗೊಂದಲ ಮೂಡಿಸುವ ಮಾತು ಬೇಡ” ಎಂದು ಅವರು ಸಲಹೆ ನೀಡಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಾಸ್ತಾವಿಕ ಭಾಷಣದಲ್ಲಿ, “ವೀರಶೈವ-ಲಿಂಗಾಯತ ಸಮಾಜ ಕವಲುದಾರಿಯಲ್ಲಿದೆ. ನಿರುದ್ಯೋಗ, ಬಡತನ ಸಮಸ್ಯೆಗಳು ಕಾಡುತ್ತಿವೆ. ಇದರ ಪರಿಹಾರ ಸಂಘಟನೆಯಲ್ಲಿದೆ. ಮಠಾಧೀಶರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಿ ಬರಬೇಕು. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಪಡೆಯುವ ಕಾಲ ಸನ್ನಿಹಿತವಾಗಿದೆ. ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವ-ಲಿಂಗಾಯತ ಅಂತಲೇ ಬರೆಯಬೇಕು” ಎಂದು ಕರೆ ನೀಡಿದರು.
“ಹಾನಗಲ್ ಕುಮಾರಸ್ವಾಮಿಗಳ ಕನಸು ಇಂದು ನನಸಾಗಿದೆ. ಎಲ್ಲರನ್ನೂ ಒಟ್ಟುಗೂಡಿಸಿ ಐಕ್ಯತಾ ಸಮಾವೇಶ ನಡೆಸಿರುವುದು ಐತಿಹಾಸಿಕ. ಪರಸ್ಪರ ಜಗಳಗಳನ್ನು ದೂರ ಮಾಡಿ, ಮೇಲು-ಕೀಳು ಭಾವನೆ ತೊಡೆದು ಹಾಕಬೇಕು. ಇದು ಶಕ್ತಿ ಪ್ರದರ್ಶನವಲ್ಲ, ಭಕ್ತಿ ಪ್ರದರ್ಶನ. ಇಂತಹ ವಾತಾವರಣ ಇನ್ನಷ್ಟು ಬೆಳೆಯಬೇಕು” ಎಂದು ಸಿದ್ದಗಂಗಾ ಮಠದ ಶ್ರೀಗಳು ಹೇಳಿದರು.
ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮಾತಾಡಿ, “ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಿದ್ದರೆ ಯಾರೂ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಜಾತಿ ಸಮೀಕ್ಷೆ ಮುಖ್ಯವಲ್ಲ, ನಮ್ಮ ಆಂತರಿಕ ಆತ್ಮ ಸಮೀಕ್ಷೆ ಮುಖ್ಯ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರಿಯಬೇಕು” ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, “ನಾವು ಎಲ್ಲರೂ ಶೂರ ವೀರರು, ಪ್ರತ್ಯೇಕ ಧರ್ಮ ಸ್ಥಾಪಿಸುವ ಶಕ್ತಿ ನಮ್ಮಲ್ಲಿದೆ. ವೈಯಕ್ತಿಕ ಲಾಭಾಸಕ್ತಿಯನ್ನು ಬದಿಗೊತ್ತಿ, ಸಮಾಜದ ಒಗ್ಗಟ್ಟಿನತ್ತ ಗಮನ ಹರಿಸಬೇಕು. ಯಾರಾದರೂ ಧರ್ಮದ ಅಡಿಯಲ್ಲಿ ಉಳಿಯುವ ಅಗತ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಾವೇಶವು ಫಕೀರ ದಿಂಗಾಲೇಶ್ವರ ಶ್ರೀ ಅವರ ನೇತೃತ್ವದಲ್ಲಿ ನಡೆಯಿತು. ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜ್ಜಿ ಜಗದ್ಗುರು, ಸಿದ್ದಗಂಗಾ ಶ್ರೀ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿ ಸಾನ್ನಿಧ್ಯ ನೀಡಿದರು. ಮಾಜಿ ಮುಖ್ಯಮಂತ್ರಿ ಶೆಟ್ಟರ್ ಮತ್ತು ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ ಬಿದರಿ ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿವಲಿಂಗಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ದೊರೆಯಿತು.






