ಹುಣಸೂರಿನ ಲಾಡ್ಜ್‌ನಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿ 27 ವರ್ಷದ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ ಎಚ್.ಡಿ.ಕೋಟೆ ತಾಲೂಕಿನ ಮಾದಾಪುರದ ರೈತ ದಿನೇಶ್ ಅವರ ಪುತ್ರನಾಗಿದ್ದು, ನವೆಂಬರ್‌ನಲ್ಲಿ ಅವನ ವಿವಾಹ ನಿಶ್ಚಯವಾಗಿತ್ತು. ಆದಾಗ್ಯೂ, ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಶ್ರೀರಂಗಪಟ್ಟಣದ ಗಂಧದಗುಡಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್, ಮೂರು ದಿನಗಳ ಹಿಂದೆ ನಗರದ ಎಪಿಎಂಸಿ ಎದುರಿನ ಬಿ.ಎಸ್.ಲಾಡ್ಜ್‌ನಲ್ಲಿ ತಂಗಿದ್ದನು. ಆದರೆ ಬುಧವಾರ ಬೆಳಗ್ಗೆಯೂ ಹೊರಬಾರದಿದ್ದರಿಂದ ಅನುಮಾನಗೊಂಡ ಸಿಬ್ಬಂದಿ ಕಿಟಕಿ ಮೂಲಕ ನೋಡಿದಾಗ, ಅವನು ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಗೋಚರಿಸಿತು. ತಕ್ಷಣವೇ ವಿಷಯವನ್ನು ನಗರ ಠಾಣಾ ಪೊಲೀಸರಿಗೆ ತಿಳಿಸಿದ್ದಾರೆ.
ಸಾವು ಅನುಮಾನಾಸ್ಪದವಾಗಿದೆ ಎಂದು ತಂದೆ ದಿನೇಶ್ ದೂರು ನೀಡಿದ್ದು, ಶವ ಪರೀಕ್ಷೆಗಾಗಿ ಮೈಸೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಎಸ್.ಐ ಮಹಾಲಿಂಗಪ್ಪ ಭೇಟಿ ನೀಡಿ ಪರಿಶೀಲಿಸಿ ಆತ ನೀಡಿದ್ದ ವಿಳಾಸ ಸಂಪರ್ಕಿಸಿ ಮಾಹಿತಿ ನೀಡಿದ್ದ ಮೇರೆಗೆ ತಂದೆ ದಿನೇಶ್ ಹಾಗೂ ಸಂಬಂಧಿಕರು ಆಗಮಿಸಿ ಗುರುತು ಪತ್ತೆ ಹಚ್ಚಿದರು.
ಲಾಡ್ಜ್ ನಲ್ಲಿ ಕ್ರಿಮಿನಾಶಕದ ಬಾಟೆಲ್ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ.27-28ಕ್ಕೆ ಮೃತ ಪ್ರವೀಣನಿಗೆ ತನ್ನ ಅಕ್ಕನ ಮಗಳೊಂದಿಗೆ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥವು ಆಗಿತ್ತು. ಆದರೆ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.






