ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆ ತೋಟದಲ್ಲಿ ಸೆಪ್ಟೆಂಬರ್ 15ರಂದು ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತನಿಖೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನು, ತಾಯಿಯಂತೆ ಆರೈಕೆ ಮಾಡಿದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವುದು ಬಹಿರಂಗವಾಗಿದೆ.
ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತುಕೊಳ್ಳದೇ ಇದ್ದರೂ ತಾಯಿಯಂತೆಯೇ ಪ್ರೀತಿ, ಕಾಳಜಿ ತೋರಿದ್ದಳು. ಆದರೆ ಮಗನಂತೆ ಇರಬೇಕಾದವನು ಕಾಮದ ದೆವ್ವವಾಗಿ ಮಾರ್ಪಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ. ಸೆ.15ರಂದು ಕೂಲಿಕಾರ್ಯಕ್ಕೆ ಹೋದ 45 ವರ್ಷದ ಮಹಿಳೆ ಮನೆಗೆ ಮರಳದೆ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರು. ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಹೆಚ್ಚಾಯಿತು. ಮರುದಿನ ಪಕ್ಕದ ಊರಿನ ಬಾಳೆ ತೋಟದಲ್ಲಿ ಆಕೆಯ ಶವ ಪತ್ತೆಯಾಯಿತು.
ದೇಹದ ಮೇಲೆ ಗಾಯದ ಗುರುತು ಕಂಡು ಬಂದ ಕಾರಣ ಜಾವಗಲ್ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದರು. ತನಿಖೆ ವೇಳೆ ಮಹಿಳೆ ಮತ್ತು ಆಕೆಯ ಬಳಿ ಬೆಳೆದ ಅಪ್ರಾಪ್ತ ಬಾಲಕ ಜಗಳವಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಅದನ್ನಾಧರಿಸಿ ಮುಂದುವರಿಸಿದ ತನಿಖೆಯಲ್ಲಿ ಆಕೆಯನ್ನೇ ಮಗನಂತೆ ಸಾಕಿದ್ದ ಬಾಲಕ ಅತ್ಯಾಚಾರ ಮಾಡಿ ಕೊಲೆಗೈದಿರುವುದು ಬಹಿರಂಗವಾಯಿತು.
17 ವರ್ಷಗಳ ಹಿಂದೆ ಪಕ್ಕದೂರಿನವನು ತಂದ ಅನಾಥ ಮಗುವಿಗೆ ತಾಯಿಯ ಕೊರತೆ ಬಾರದಂತೆ ಆರೈಕೆ ಮಾಡಿದ ಮಹಿಳೆಯನ್ನೇ ಅವನು ಕೊನೆಗೆ ದ್ರೋಹಿಸಿದ್ದಾನೆ. ಶಾಲೆಗೆ ಕಳಿಸಿ, ಕೈತುತ್ತು ನೀಡಿ, ಮಮತೆಯಿಂದ ಸಾಕಿದ ಆಕೆಯನ್ನೇ ಸೆ.15ರಂದು ಏಕಾಂಗಿ ಸಿಕ್ಕ ಸಂದರ್ಭ ಪಿಶಾಚಿಕ ಕೃತ್ಯ ಎಸಗಿ ಕೊಲೆಗೈದಿದ್ದಾನೆ. ಈ ಘಟನೆಯಲ್ಲಿ ಅವನೊಬ್ಬನೇ ಅಲ್ಲ, ಇನ್ನೊಬ್ಬರ ಸಹಕಾರವೂ ಇರಬಹುದು ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಸತ್ಯ ಹೊರ ಬರಬೇಕೆಂದು ಒತ್ತಾಯಿಸಿದ್ದಾರೆ.
ಕೂಲಿಕಾರ್ಯ ಮಾಡಿಕೊಂಡರೂ ಸ್ವಾಭಿಮಾನದಿಂದ ಬದುಕುತ್ತಿದ್ದ ಈಕೆ, ಗಂಡನಿಲ್ಲದೇ ಸಹ ಹೋರಾಡುತ್ತಾ ಮಗನಿಗೆ ಮನೆ ಕಟ್ಟಬೇಕೆಂಬ ಕನಸು ಬೆಳೆಸಿಕೊಂಡಿದ್ದಳು. ಆದರೆ ಆಕೆಯ ಸಾಕಿದವನಿಂದಲೇ ಇಂತಹ ಹೀನ ಕೃತ್ಯ ಸಂಭವಿಸಿರುವುದು ಊರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ.






