ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ದೇವಾಲಯದಲ್ಲಿದ್ದ ಗಣಪತಿ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿಯ ಹಾರ ಹಾಕಿ ವಿಕೃತಿ ಮೆರೆದಿದ್ದಾರೆ. ಈ ಕೃತ್ಯದಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ದೇವರ ಪ್ರತಿಮೆಗೆ ಅವಮಾನ ಮಾಡಿದ ಘಟನೆ ಖಂಡನೆಗೆ ಕಾರಣವಾಗಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪುರಸಭೆಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ. ದೇವಾಲಯದೊಳಗಿನ ಗಣಪತಿ ಮೂರ್ತಿಯ ಬಳಿ ಅಜ್ಞಾತರು ಎರಡು ಚಪ್ಪಲಿಗಳನ್ನು ಇಟ್ಟು ಅವಮಾನಕಾರಿ ಕೃತ್ಯ ಎಸಗಿದ್ದಾರೆ.
ಇಂದು ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಬಂದಾಗ, ಗಣಪತಿ ಮೂರ್ತಿಗೆ ಹಾಕಲಾಗಿದ್ದ ಚಪ್ಪಲಿ ಹಾರವನ್ನು ಕಂಡು ಬೆಚ್ಚಿಬಿದ್ದರು. ದೇವರನ್ನು ಪೂಜಿಸುವ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ಈ ದುಷ್ಕೃತ್ಯ ಎಲ್ಲೆಡೆ ಆಕ್ರೋಶ ಮೂಡಿಸಿದೆ.
ಪವಿತ್ರ ದೇವಾಲಯದೊಳಗೆ ನಡೆದಿರುವ ಈ ಅವಮಾನಕಾರಿ ಕೃತ್ಯವು ಭಕ್ತರ ಮನಸ್ಸಿಗೆ ಆಘಾತ ತಂದಿದ್ದು, ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಭಕ್ತರು, ಸಾರ್ವಜನಿಕರು ಒಟ್ಟಾಗಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಗಣಪತಿಯನ್ನು ಮೊದಲ ಪೂಜ್ಯನೆಂದು ಭಜಿಸುವ ಜನರ ಭಾವನೆಗಳಿಗೆ ತೀವ್ರ ನೋವುಂಟಾಗಿರುವ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಭದ್ರತೆ ಹೆಚ್ಚಿಸಬೇಕೆಂದು ಕೂಡ ಜನರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ ಪಿ ಮೊಹಮ್ಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಬಲೆಬೀಸಲಾಗಿದೆ.






