ಗಣೇಶ ಮೆರವಣಿಗೆಯ ವೇಳೆ ಸಂಭವಿಸಿದ ಕ್ಯಾಂಟರ್ ಪಲ್ಟಿ ದುರಂತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಗೊಂಡಿದ್ದ ಚಾಲಕ ಭುವನೇಶ್ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಭುವನೇಶ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಗಣಪತಿ ಮೆರವಣಿಗೆಯ ವೇಳೆ ಕಂಟೇನರ್ ಲಾರಿ ಜನರನ್ನು ಹರಿದು 10 ಮಂದಿ ಮೃತಪಟ್ಟ ದುರಂತದ ಕುರಿತು ಹೊಸ ಆರೋಪಗಳು ಕೇಳಿ ಬಂದಿವೆ. ಚಾಲಕನು ಮದ್ಯಪಾನ ಮಾಡಿ ನಿದ್ರಿಸುತ್ತಿದ್ದಾಗ, ಕ್ಲೀನರ್‌ವೇ ವಾಹನವನ್ನು ಚಲಾಯಿಸುತ್ತಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಅವಘಡಕ್ಕೆ ಕಂಟೇನರ್ ಚಾಲಕ ಭುವನೇಶ್‌ನ ಅಜಾಗರೂಕತೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆತ ಮದ್ಯಪಾನ ಮಾಡಿದ್ದ ನೆಂಬ ಆರೋಪ ಕೂಡ ಇದೆ. ಈ ಹಿನ್ನೆಲೆ ಯಲ್ಲಿ ಆತನ ರಕ್ತ ಪರೀಕ್ಷೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭುವನೇಶ್ ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆ ಬಳಿ ಇರುವ ಕಟ್ಟೆಬೆಳಗುಲಿ ಗ್ರಾಮದವನಾಗಿದ್ದು, ಅಪಘಾತದ ವೇಳೆ ಮದ್ಯಪಾನ ಮಾಡಿ ಲಾರಿಯಲ್ಲೇ ಮಲಗಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಲೀನರ್ ಲಾರಿ ಚಾಲನೆ ಮಾಡುತ್ತಿದ್ದಾನೆಂಬ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಹಾಗೂ ಗಾಯಾಳುಗಳ ಕುಟುಂಬದವರು ಚಾಲಕನ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎದುರುಗಡೆಯಿಂದ ಬೈಕ್ ಬರುತ್ತಿದ್ದರೂ ಲಾರಿಯ ವೇಗ ಕಡಿಮೆ ಮಾಡಲು ಬ್ರೇಕ್ ಬಳಸುವ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಮೆರವಣಿಗೆಯ ಮೇಲೆ ಹರಿದಿದೆ ಎಂದು ಹೇಳಲಾಗಿದೆ.
“ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ನಡೆದ ಗಣೇಶೋತ್ಸವ ದುರಂತಕ್ಕೆ ಟ್ರಕ್ ಚಾಲಕ ಭುವನೇಶ್‌ನ ನಿರ್ಲಕ್ಷ್ಯವೇ ಕಾರಣ. ತನಿಖೆಗೆ ಸೂಚನೆ ನೀಡಿದ್ದು, ಮೃತರ ಕುಟುಂಬಕ್ಕೆ ಘೋಷಿಸಿದ 5 ಲಕ್ಷ ರೂ. ಪರಿಹಾರ ಜತೆಗೆ ಹೆಚ್ಚಿನ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಲಾಗುವುದು” ಎಂದು ಕೃಷ್ಣಬೈರೇಗೌಡ,ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.






