ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಇನ್ನೂ ಚರ್ಚೆಯಲ್ಲಿರುವಾಗ, ಸಾಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಇಬ್ಬರು ಬಾಲಕರು ಉಗುಳುತ್ತಿರುವ ದೃಶ್ಯವು ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಭಾನುವಾರ ನಡೆದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯ ವೇಳೆ, ಅನ್ಯಕೋಮಿನ ಇಬ್ಬರು ಬಾಲಕರು ಮೂರ್ತಿಯ ಮೇಲೆ ಉಗುಳಿದ ಘಟನೆ ನಗರದ ವಾತಾವರಣವನ್ನು ಕೆಲಕಾಲ ಉದ್ವಿಗ್ನಗೊಳಿಸಿತು.
ಸಾಗರ ತಾಲ್ಲೂಕಿನ ಜನ್ನತ್ ಗಲ್ಲಿಯಲ್ಲಿ, ಜೈಭುವನೇಶ್ವರಿ ಯುವಕ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಮಾರ್ಕೆಟ್ ರಸ್ತೆಯಲ್ಲಿ ಸಾಗುತ್ತಿರುವಾಗ, ಪಕ್ಕದ ಕಟ್ಟಡದ ಮೇಲೆ ನಿಂತ ಅನ್ಯ ಕೋಮಿನ ಇಬ್ಬರು ಬಾಲಕರು ಮೂರ್ತಿಯ ಮೇಲೆ ಉಗುಳಿದರು. ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತ, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.
ಘಟನೆ ಸಂಬಂಧ ಪೊಲೀಸ್ ಇಲಾಖೆಯವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಡಾ. ಬೆನಕಪ್ರಸಾದ್ ಅವರು, ಬಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮೆರವಣಿಗೆ ಮುಂದುವರೆಯಿತು. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಕ್ಕಳ ತಾಯಿ ಕ್ಷಮೆಯಾಚಿಸಿದರು.ಈ ಘಟನೆಗೆ ಸಂಬಂಧಿಸಿದಂತೆ ಬಾಲಕರ ತಾಯಿ ಖೈರುನ್ನೀಸಾ ಅವರು, ಹಿಂದೂ ಧರ್ಮದವರಿಗೆ ಕ್ಷಮೆಯಾಚಿಸುತ್ತೇನೆ. ನಮ್ಮ ಮಕ್ಕಳು ಈ ರೀತಿ ಮಾಡಬಾರದಾಗಿತ್ತು. ಗಣಪತಿ ಮೇಲೆ ಉಗಳಿದ್ದು ನನಗೆ ಬೇಜಾರಾಗಿದೆ. ಈ ರೀತಿ ಮಾಡದಂತೆ ಮಕ್ಕಳಿಗೆ ಬುದ್ದಿ ಮಾತು ಹೇಳುತ್ತೇನೆ ಎಂದಿದ್ದಾರೆ.






