ರಸ್ತೆ ಅಪಘಾತಗಳ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಶಿವಮೊಗ್ಗದ ಮಲವಗೊಪ್ಪದ ಬಳಿ ನಡೆದ ಬೈಕ್ ಅಪಘಾತದಲ್ಲಿ, ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ದುರ್ಮರಣಕ್ಕೆ ಒಳಗಾಗಿದ್ದಾರೆ. ಈ ದುಃಖದ ಘಟನೆ ಎಲ್ಲರಿಗೂ ರಸ್ತೆ ಸುರಕ್ಷತೆಗೆ ಎಚ್ಚರಿಕೆಯಿಂದ ವರ್ತನೆಯ ಅಗತ್ಯವಿರುವುದನ್ನು ಸೂಚಿಸುತ್ತದೆ.
ಮೃತ ಯುವತಿಯನ್ನು ಕವಿತಾ (26) ಎಂದು ಗುರುತಿಸಲಾಗಿದೆ. ಆಕೆ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿತು. ಇನ್ನೊಂದು ಹೆಚ್ಚು ಲಗೇಜ್ ತುಂಬಿಕೊಂಡಿರುವ ಬೈಕ್, ಡಿಕ್ಕಿ ಹೊಡೆದಿದೆ.
ಈ ವೇಳೆ ಯುವತಿಯ ಸಹೋದರ ಫುಟ್‌ಪಾತ್ ಮೇಲೆ ಬಿದ್ದರೆ, ಆಕೆ ರಸ್ತೆಗೆ ಬಿದ್ದಿದ್ದಳು. ಬಳಿಕ ಹಿಂದೆ ಇದ್ದ ಸಿಟಿ ಬಸ್ ಆಕೆಯ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕವಿತಾಳಿಗೆ ವಿವಾಹ ನಿಶ್ಚಯ ಆಗಿದ್ದು, 15 ದಿನಗಳಲ್ಲಿ ಹಸೆಮಣೆ ಏರಬೇಕಿತ್ತು. ಆದರೆ, ದುರಾದೃಷ್ಟವಶಾತ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಹಿಂದೆ ಇಂತಹ ಹಲವು ಘಟನೆಗಳು ಸಹ ನಡೆದಿವೆ.
ಕೆಲವು ವಾಹನ ಸವಾರರ ನಿರ್ಲಕ್ಷ್ಯದಿಂದ ಅಪಘಾತ ಪ್ರಕರಣಗಳು ಇನ್ನಷ್ಟು ಆಗುತ್ತಿದೆ. ಪೊಲೀಸರು ಇದನ್ನು ತಡೆಯಲು ಹಲವು ಜಾಗೃತಿ ಕ್ರಮಗಳನ್ನು ಕೈಗೊಂಡರೂ, ಕೆಲವು ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಿದ ಸಂದರ್ಭ ಕಂಡು ಬಂದಿದೆ. ನಿನ್ನೆ ಮಾತ್ರ ಚಾರ್ಮಾಡಿ ಘಾಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಕೊಟ್ಟಿಗೆಹಾರದ ಕಡೆ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯು ಉಜಿರೆ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಗ್ಯಾಸ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಅಪಘಾತ ಘಟನೆಯಿಂದ ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟಿದ ಘಟನೆ ನಡೆದಿದೆ. ಘಾಟಿಯ ಎರಡನೇ ತಿರುವಿನ ಬಳಿ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಇನ್ನು ಘಟನೆ ಬಗ್ಗೆ ವಾಹನ ಸವಾರರು ಧರ್ಮಸ್ಥಳ ಪೊಲೀಸ್ ಠಾಣೆಗೆ ತಿಳಿಸಿದರು. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಸೇರಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾನುವಾರ ಹಿನ್ನೆಲೆ ಘಾಟಿ ಪ್ರದೇಶದಲ್ಲಿ ಹೆಚ್ಚಿನ ವಾಹನಗಳು ಸಂಚಾರ ಮಾಡುತ್ತಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿತ್ತು.






