ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ ಹಾಗೂ ಇತರ ಸರ್ಕಾರದ ಅಧೀನ ಸಂಸ್ಥೆಗಳಿಗೆ ಸೇರಿದ, 15 ವರ್ಷಗಳಿಂದ ಹೆಚ್ಚು ಬಳಕೆಯಾದ ವಾಹನಗಳನ್ನು ಕಡ್ಡಾಯವಾಗಿ ನಾಶಮಾಡುವಂತೆ ಸರ್ಕಾರ ಪ್ರಮುಖ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರವು ವಿಶೇಷ ರಾಜ್ಯ ಪತ್ರಿಕೆ ಹೊರಡಿಸಿದ್ದು, ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಅನ್ವಯ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 64(ಪಿ)ರಲ್ಲಿ ಪುದತ್ತವಾದ ಅಧಿಕಾರದಡಿ ರಾಜ್ಯದಲ್ಲಿ ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.
ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ – 2022 ರ ಅನುಸಾರ, 15 ವರ್ಷಗಳನ್ನು ಪೂರೈಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ/ಸರ್ಕಾರದ ಅಧೀನ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳಲ್ಲಿ ಇರುವ 5000 ವಾಹನಗಳನ್ನು ಆದ್ಯತೆ ಮತ್ತು ಬಳಕೆಯ ಆಧಾರದ ಮೇಲೆ ಹಂತ ಹಂತವಾಗಿ ನಾಶಮಾಡಲು ಅನುಮೋದನೆ ನೀಡಲಾಗಿದೆ.
ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಪತ್ರದ ಪ್ರಕಾರ, ‘Scheme for Special Assistance to States for Capital Investment 2025-26’ ನಲ್ಲಿ ನೀಡಿದ ಮಾರ್ಗಸೂಚಿಗಳಂತೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗುತ್ತಿದೆ. 15 ವರ್ಷಗಳಿಂದ ಮೇಲ್ಪಟ್ಟ ಎಲ್ಲಾ ಸರ್ಕಾರಿ ವಾಹನಗಳನ್ನು ಖಾಸಗಿ ಕೇಂದ್ರಗಳಲ್ಲಿ ಅಲ್ಲದೆ, ಕಡ್ಡಾಯವಾಗಿ ನಿಗದಿತ RVSF (Registered Vehicle Scrapping Facility) ಗಳಲ್ಲಿ ನಾಶಪಡಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ.
ಈ ಕುರಿತು ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನಿಗಮಗಳು, ಮಂಡಳಿ, ನಗರಸಭೆಗಳು ಹಾಗೂ ಸರ್ಕಾರದ ಇತರ ಅಧೀನ ಸಂಸ್ಥೆಗಳಿಗೆ ಸೇರಿದ, ನೋಂದಣಿಗೊಂಡು 15 ವರ್ಷಗಳಿಗಿಂತ ಅಧಿಕ ವಯಸ್ಸುಳ್ಳ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತ RVSF ಕೇಂದ್ರಗಳಲ್ಲಿ ನಾಶಪಡಿಸಲು ಸೂಚಿಸಲಾಗಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂ. ಆಇ 418 ವೆಚ್ಚ-11/2022 (E), ದಿನಾಂಕ: 08.09.2025 ರ ಅನುಮತಿಯನ್ನು ಪಡೆದು ಹೊರಡಿಸಿದೆ.






