ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಮೇಲ್ಸೇತುವೆ ಬಳಿ ಮಂಗಳವಾರ ಬೆಳಗ್ಗೆ ಅಪಘಾತ ಸಂಭವಿಸಿತು. ಹೊಂಡ ತಪ್ಪಿಸುವಾಗ ಸ್ಕೂಟರ್‌ನಿಂದ ಬಿದ್ದ ಮಹಿಳೆಯ ಮೇಲೆ ಮೀನಿನ ಲಾರಿ ಹತ್ತಿ, ಅವರು ತಕ್ಷಣವೇ ಪ್ರಾಣ ಕಳೆದುಕೊಂಡರು. ಮೃತಪಟ್ಟವರು ಎ.ಜೆ. ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಧವಿ (44).
ಚಿತ್ರಾಪುರದ ತನ್ನ ಮನೆಯಿಂದ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಾಧವಿ, ಬೆಳಗ್ಗೆ 8.30ರ ಸುಮಾರಿಗೆ ಕೂಳೂರು ಮೇಲ್ಸೇತುವೆ ಬಳಿ ರಾಯಲ್ ಓಕ್ ಮಳಿಗೆ ಎದುರು ದುರಂತಕ್ಕೊಳಗಾದರು. ಹೆದ್ದಾರಿಯಲ್ಲಿದ್ದ ಹೊಂಡ ತಪ್ಪಿಸಲು ಯತ್ನಿಸುವಾಗ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದ ಅವರು, ಹಿಂದಿನಿಂದ ಬಂದ ಮೀನು ಲಾರಿ ಡಿಕ್ಕಿಗೆ ತುತ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.
ಸ್ಕೂಟರ್ ಚಕ್ರ ಗುಂಡಿಗೆ ಬಿದ್ದ ತಕ್ಷಣ ಮಾಧವಿ ರಸ್ತೆಗೆ ಬಿದ್ದು, ಹಿಂದಿನಿಂದ ಬಂದ ಲಾರಿ ಅವರ ಮೇಲೆ ಹರಿದುಕೊಂಡು ಹೋಯಿತು. ಲಾರಿಯ ಎಡ ಚಕ್ರದಡಿಗೆ ಸಿಲುಕಿದ ಅವರನ್ನು ಹಲವಾರು ಅಡಿಗಳಷ್ಟು ಎಳೆದುಕೊಂಡು ಹೋಯಿತು. ಬಿದ್ದಾಗ ತಲೆಯಲ್ಲಿದ್ದ ಹೆಲ್ಮೆಟ್ ಸಹ ದೂರಕ್ಕೆ ಹಾರಿಬಿಟ್ಟಿತ್ತು. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಲಾರಿ ಚಾಲಕ ಮೊಹಮ್ಮದ್ ಫಾರೂಕ್‌ನ ನಿರ್ಲಕ್ಷ್ಯ ಚಾಲನೆ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಂಗಳೂರು ನಗರ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಜಾಮ್ ಉಂಟಾಯಿತು.
“ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಹೆದ್ದಾರಿಯ ಅವ್ಯವಸ್ಥೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳಕ್ಕೆ ಬಂದ ಮಂಗಳೂರು ಸಂಚಾರ ವಿಭಾಗದ ಡಿಸಿಪಿ ಕೆ. ರವಿಶಂಕರ್ ಅವರ ಎದುರು ಜನರು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ನಿರಂತರವಾಗಿ ಪ್ರಾಣ ಹಾನಿ, ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾ ಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಹೊಣೆ ಯಾರು? ಹೆದ್ದಾರಿ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಮೂಕರಾಗಿ ದ್ದಾರೆ. ಹೀಗೆಯೇ ಸಾವು ಸಂಭವಿಸುತ್ತಿದ್ದರೆ ಜನರು ಬೀದಿಗಿಳಿಯಬೇಕಾದೀತು” ಎಂದು ಪಾಲಿಕೆ ಮಾಜಿ ಸದಸ್ಯ ದಯಾನಂದ ಶೆಟ್ಟಿ ಅವರು ಎಚ್ಚರಿಸಿದರು.
ಕೂಳೂರು ನಾಗರಿಕ ಹಿತರಕ್ಷಣ ಸಮಿತಿಯ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು, ಮಂಗಳೂರಿನಲ್ಲಿ ಮಾತ್ರ ಈ ರೀತಿ ನಡೆಯುತ್ತಿದೆ. ಮಳೆಗಾಲಕ್ಕೆ ಮೊದಲು ರಸ್ತೆ ದುರಸ್ತಿ ಮಾಡಬೇಕು ಎಂದರೆ ಯಾರೂ ಕೇಳುವುದಿಲ್ಲ. ಮಳೆ ಆರಂಭ ವಾದ ಬಳಿಕ ತೇಪೆ ಹಾಕುತ್ತಾರೆ. ಅದು ಎರಡು ದಿನದಲ್ಲಿ ಎದ್ದು ಹೋಗುತ್ತದೆ. ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಹೆದ್ದಾರಿಯಲ್ಲಿ ಅಪಘಾತ ನಡೆದು, ಹೊಂಡ ಗುಂಡಿಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆಗೆ ತೇಪೆ ಹಾಕುವ ಕಾರ್ಯ ಆರಂಭಿಸಿದರು. ಜೆಸಿಬಿಗಳ ಮೂಲಕ ಗುಂಡಿಗಳನ್ನು ಸಮತಟ್ಟು ಮಾಡಿ, ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಗುಂಡಿಗಳಿಗೆ ಜಲ್ಲಿ ತುಂಬಿಸಿ ತೇಪೆ ಹಾಕಿದರು. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಒಂದು ಜೀವವಾದರೂ ಉಳಿಯುತ್ತಿತ್ತು ಎಂಬುದು ಜನರ ಅಭಿಪ್ರಾಯ.
ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದರು, ಶಾಸಕರು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ,
ಹೆದ್ದಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಬುದ್ಧಿವಂತರ ಜಿಲ್ಲೆಯಲ್ಲಿ ಮೂಲ ಸೌಕರ್ಯಕ್ಕಾಗಿ ಯಾರೂ ಪ್ರತಿಭಟನೆ ನಡೆಸುವುದಿಲ್ಲ. ಜನ ಪ್ರತಿನಿಧಿಗಳೂ ಬೇರೆ ವಿಷಯವಾದರೆ ನಾಮುಂದು ತಾಮುಂ ದು ಎಂದು ಮುಂದೆ ಬರುತ್ತಾರೆ ಎನ್ನುವ ಆರೋಪಗಳೂ ಕೇಳಿಬಂದವು.
ವರ್ಷದ ಹಿಂದೆ ಹೊಸ ಮನೆ ಮಾಡಿದ್ದರು ಮಾಧವಿ 2017ರ ಜನವರಿಯಿಂದ ಕುಂಟಿಕಾನದ ಎ.ಜೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕುಳಾಯಿ ಚಿತ್ರಾಪುರ ಬಳಿಯ ಯಮುನಾ ಆಶಾ ಸಿಟಿಯಲ್ಲಿ ವಾಸವಾಗಿದ್ದರು. ವರ್ಷದ ಹಿಂದೆ ಹೊಸ ಮನೆ ಮಾಡಿದ್ದರು. ಅವರ ಪತಿ ಉಡುಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ವೈದ್ಯಾಧಿಕಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಕೂಡ ಇದೇ ಸ್ಥಳದಲ್ಲಿ ಅಪಘಾತ
ಕಳೆದ ತಿಂಗಳು ಕೂಡ ಇದೇ ಸ್ಥಳದಲ್ಲಿ ಸ್ಕೂಟರ್ ಮತ್ತು ಮೀನಿನ ಲಾರಿ ನಡುವೆ ಅಪಘಾತವೊಂದು ಸಂಭವಿಸಿತ್ತು. ಆ 13ರಂದು ರಾತ್ರಿ 9 ಗಂಟೆ ವೇಳೆಗೆ ಇಸ್ಮಾಯಿಲ್ ಅವರು ಸ್ಕೂಟರ್‌ನಲ್ಲಿ ಕೂಳೂರು ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಾಯಲ್ ಓಕ್ ಬಳಿ ತಲುಪುತಿದ್ದಂತೆ ಗುಂಡಿಗಳ ಕಾರಣಕ್ಕೆ ಸ್ಕೂಟರ್ ನಿಧಾನ ಮಾಡಿದ್ದರು. ಈ ವೇಳೆ ಹಿಂದಿನಿಂದ ಬಂದ ಮೀನು ಲಾರಿಯನ್ನು ಚಾಲಕ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇಸ್ಮಾಯಿಲ್ ಚಲಾಯಿಸುತ್ತಿದ್ದ ಸ್ಕೂಟರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಇಸ್ಮಾಯಿಲ್ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಎಡಗಾಲಿನ ಮೂಳೆ ಮುರಿದು, ಗಂಭೀರ ಸ್ವರೂಪದ ಗಾಯವಾಗಿತ್ತು.
ಹೆದ್ದಾರಿ ಅಧಿಕಾರಿ ಮೇಲೆ ಪ್ರಕರಣ ಕೂಳೂರಿನಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಮೀನು ಲಾರಿ ಚಾಲಕ ಮೊಹಮ್ಮದ್ ಫಾರೂಕ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಯೋಜನಾ ನಿರ್ದೇ ಶಕರ ಮೇಲೆ ಪ್ರಕರಣ ದಾಖಲಾಗಿದೆ. ಈ ಅಪಘಾತಕ್ಕೆ ಹೆದ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ಆಗಿರುವ ರಸ್ತೆಗುಂಡಿಗಳನ್ನು ಮುಚ್ಚದೆ ನಿರ್ಲಕ್ಷತನ ವಹಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಉಲ್ಲೇಖೀಸಲಾಗಿದೆ. ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್‌ಕಲಂ 281, 106(1) ಮತ್ತು ಐಎಂವಿ ಕಾಯ್ದೆ 198(ಎ) ರಂತೆ ಪ್ರಕರಣ ದಾಖಲಾಗಿದೆ.
ಕೂಳೂರಿನ ರಸ್ತೆಯ ಈ ದೊಡ್ಡ ಗುಂಡಿ ಮಳೆ ಬಿದ್ದಾಗ ನೀರಿನಿಂದ ತುಂಬಿ, ರಸ್ತೆ ಎಲ್ಲಿ ಗುಂಡಿ ಎಲ್ಲಿ ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಸಂಬಂಧಪಟ್ಟವರು ಇದನ್ನು ಮುಚ್ಚದೆ ಬಿಟ್ಟ ಕಾರಣ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದವು. ಇತ್ತೀಚೆಗೆ ಎರಡು ಕಾರುಗಳ ಮಧ್ಯೆ ಡಿಕ್ಕಿಯೂ ಸಂಭವಿಸಿತ್ತು. ನಿಯಮಿತವಾಗಿ ಓಡಾಡುವವರಿಗೆ ಈ ಗುಂಡಿ ಪರಿಚಯ ಇದ್ದರೂ, ಹೊಸಬರಿಗೆ ಇದು ಮರಣ ಗುಂಡಿಯಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೂಳೂರಿನಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಹೆದ್ದಾರಿ ಪ್ರಾ ಧಿಕಾರಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಕಾಮಗಾರಿಗೆ ಅಡ್ಡಿಯಾಗಿತ್ತು. ಪರ್ಯಾಯವಾಗಿ ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಲಾಯಿ ತಾದರೂ, ಅದು ಮಳೆಗೆ ಕೊಚ್ಚಿ ಹೋಗಿದೆ. ಸದ್ಯ ಕೆಲವು ದಿನಗಳಿಂದ ಮಳೆ ಸ್ಥಗಿತಗೊಂಡಿರುವುದರಿಂದ ಕಾಮಗಾರಿಗೆ ಸಿದ್ದತೆ ನಡೆಸಲಾಗಿತ್ತು. ಅದರೆ ಅದರ ನಡುವೆ ಈ ಘಟನೆ ನಡೆಯಿತು. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಗುಂಡಿ ಇರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ತತ್‌ಕ್ಷಣವೇ ಕಾರ್ಯಪ್ರವೃತ್ತರಾಗಿ ಡಾಮರು ಹಾಕುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.






