ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಕ್ಲರ್ಕ್ ಮಹಾಂತೇಶ್ ಬುಕನಟ್ಟಿ ಬರ್ಬರ ಹತ್ಯೆಗೆ ಬಲಿಯಾಗಿದ್ದಾನೆ. ರಾತ್ರಿ ಮನೆಗೆ ಮರಳುತ್ತಿದ್ದಾಗ, ಆತನ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಅನೈತಿಕ ಬಾಂಧವ್ಯದ ದ್ವೇಷವೇ ಈ ಕೊಲೆಗೆ ಕಾರಣವೆಂದು ಶಂಕಿಸಲಾಗುತ್ತಿದೆ.
ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ್ ಬುಕನಟ್ಟಿ (24) ಎಂಬ ಯುವಕ ಹತ್ಯೆಯಾದ ದುರ್ದೈವಿ.
ಕೊಲೆಯಾದ ಮಹಾಂತೇಶ್ ಹಾಗೂ ಆರೋಪಿ ಬಸವರಾಜ್ ಬುಕನಟ್ಟಿ ಅವರ ಪತ್ನಿಯ ನಡುವೆ ಅನೈತಿಕ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ. ಈ ವಿಷಯ ಒಂದು ವರ್ಷದ ಹಿಂದೆ ಬಹಿರಂಗಗೊಂಡಿತ್ತು. ಅದೇ ಸಂದರ್ಭದಲ್ಲಿ ಪೊಲೀಸರಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಬಳಿಕ ಗ್ರಾಮ ಹಿರಿಯರ ಮಧ್ಯಸ್ಥಿಕೆಯಿಂದ ವಿಷಯವನ್ನು ರಾಜಿ ಸಂಧಾನದ ಮೂಲಕ ಮುಚ್ಚಿ ಹಾಕಲಾಗಿತ್ತು.
ಆದರೆ, ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಬಸವರಾಜ್, ಮಹಾಂತೇಶನ ಕೊಲೆಗೆ ಸಂಚು ರೂಪಿಸಿದ್ದಾನೆ. ಮಹಾಂತೇಶನು ಬೆಳಗಾವಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ರಾತ್ರಿ ಕೆಲಸ ಮುಗಿಸಿ ಶಹಾಬಂದರ ಗ್ರಾಮಕ್ಕೆ ಹಿಂದಿರುಗುತ್ತಿದ್ದನು. ಇದನ್ನು ಗಮನಿಸಿದ ಆರೋಪಿಗಳು, ನಿನ್ನೆ ರಾತ್ರಿ ಆತನಿಗಾಗಿ ಕಾದು ಕುಳಿತಿದ್ದಾರೆ.
ಮಹಾಂತೇಶ್ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆರೋಪಿ ಬಸವರಾಜ್ ತನ್ನ ಮೂವರು–ನಾಲ್ಕು ಮಂದಿ ಸ್ನೇಹಿತರೊಂದಿಗೆ ಅಟ್ಟಹಾಸ ಎಬ್ಬಿಸಿದ್ದಾನೆ. ಅವರು ಕೈಯಲ್ಲಿ ಹಿಡಿದಿದ್ದ ಲಾಂಗ್ ಮತ್ತು ಮಚ್ಚುಗಳಿಂದ ಕತ್ತು, ಹೊಟ್ಟೆ, ಬೆನ್ನು ಸೇರಿ ದೇಹದ ಹಲವೆಡೆ ನಿರ್ದಯವಾಗಿ ಕೊಚ್ಚಿ ಮಹಾಂತೇಶ್‌ನನ್ನು ಹತ್ಯೆ ಮಾಡಿದ್ದಾರೆ. ಈ ಕ್ರೂರ ಕೃತ್ಯ ಮಾಡಿದ ನಂತರ, ಆರೋಪಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಾಂತೇಶ್ ಮನೆಯತ್ತ ಹೋಗುತ್ತಿದ್ದ ದೃಶ್ಯ ಹಾಗೂ ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವ ಯುವಕನ ದೃಶ್ಯ ದಾಖಲಾಗಿದೆ. ಇದೇ ಯುವಕ ಬಸವರಾಜ್‌ಗೆ ಮಾಹಿತಿ ನೀಡಿ ಕೊಲೆಗೆ ಸಹಕರಿಸಿದ್ದಾನೆ ಎಂದು ತಿಳಿದುಬಂದಿದೆ
ಘಟನೆ ನಡೆದ ತಕ್ಷಣ ಯಮಕನಮರಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾಂತೇಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತನ ಕುಟುಂಬಸ್ಥರು, ಒಂದು ವರ್ಷದ ಹಿಂದಿನ ದ್ವೇಷವೇ ಈ ಕೊಲೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಆರೋಪಿಗಳ ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.






