ಮದುವೆಯಾಗಿ 11 ವರ್ಷ ಕಳೆದರೂ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದ ವ್ಯಕ್ತಿ, ಕೊನೆಗೆ ಅವಳನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಸಂಭವಿಸಿದೆ. ಪ್ರಸನ್ನ ಅಲಿಯಾಸ್ ಚಂದು ಎಂಬಾತ ತನ್ನ ಪತ್ನಿ ದೇವಿಕಾಳ ಜೀವ ತೆಗೆದುಕೊಳ್ಳಲು ಮುಂದಾಗಿದ್ದು, ಇದೀಗ ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಡರ ಹಳ್ಳಿಯಲ್ಲಿ ಸೆಪ್ಟೆಂಬರ್ 18ರಂದು ಈ ಒಂದು ಕೃತ್ಯ ನಡೆದಿದೆ. ಹಲವು ವರ್ಷಗಳಿಂದ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಪತಿಯ ಕಿರುಕುಳ ಪತ್ನಿಗೆ ನಿರಂತರವಾಗಿ ಮುಂದುವರಿಯುತ್ತಿತ್ತು ಎಂದು ಮಾಹಿತಿ ಲಭಿಸಿದೆ.
ಗಂಡನ ಮದ್ಯಪಾನಿ ಸ್ವಭಾವ ಮತ್ತು ನಿರಂತರ ಕಿರುಕುಳವನ್ನು ಸಹಿಸಲು ಆಗದೆ ದೇವಿಕಾ, ಐದು-ಆರು ವರ್ಷಗಳ ಹಿಂದೆ ಗಂಡನಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದರು. ಮಕ್ಕಳನ್ನು ತಾಯಿಯ ಬಳಿ ಬಿಟ್ಟು, ತಾನೊಬ್ಬಳೇ ಜೀವನ ಸಾಗಿಸುತ್ತಾ ಖಾಸಗಿ ಆಸ್ಪತ್ರೆಗೆ ಪೇಷೆಂಟ್ ಕೇರ್ ಟೆಕರ್ ಆಗಿ ದುಡಿಯುತ್ತಿದ್ದರು. ಆದರೆ ಪ್ರಸನ್ನ ಅವಳ ಕೆಲಸದ ಸ್ಥಳಕ್ಕೆ ಆಗಾಗ ಬಂದು ಜಗಳವಾಡುವುದಲ್ಲದೆ, ಜೀವ ಬೆದರಿಕೆ ಹಾಕುತ್ತಿದ್ದುದಾಗಿ ತಿಳಿದುಬಂದಿದೆ.
ಸೆಪ್ಟೆಂಬರ್ 17ರಂದು ಪ್ರಸನ್ನ ತನ್ನ ಪತ್ನಿ ದೇವಿಕಾಗೆ ಕರೆ ಮಾಡಿ ಹಣವನ್ನು ಬೇಡಿಕೊಂಡಿದ್ದ. ಮರುದಿನ ಮಧ್ಯಾಹ್ನ, ಅಂದರೆ ಸೆಪ್ಟೆಂಬರ್ 18ರಂದು, ದೇವಿಕಾಳ ಮನೆಯಿಂದಲೇ ಚಾಕುವಿನಿಂದ ಕುತ್ತಿಗೆ ಮತ್ತು ಕೈಗೆ ಇರಿದು ಕೊಲೆಗೆ ಯತ್ನಿಸಿದನು. ಈ ವೇಳೆ ಮನೆಯ ಮಾಲೀಕರು ಧೈರ್ಯವಾಗಿ ಮಧ್ಯ ಪ್ರವೇಶಿಸಿ ದೇವಿಕಾಳನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು.
ಅನುಮಾನವೇ ಹಿಂಸೆಗೆ ಕಾರಣ
ತನ್ನ ಪತ್ನಿ ಇನ್ನೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದಲೇ ಪ್ರಸನ್ನ ಈ ಹತ್ಯಾ ಪ್ರಯತ್ನ ನಡೆಸಿದ್ದಾನೆ. ಆಗಾಗ ಮನೆಗೆ ಬಂದು “ಇಲ್ಲಿ ಬೇರೆ ಯಾರಾದರೂ ಇದ್ದಾರೆ” ಎಂದು ಜಗಳವಾಡುತ್ತಿದ್ದನೆಂದು ದೇವಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇವಿಕಾಳ ಚಿನ್ನಾಭರಣವನ್ನೂ ಪ್ರಸನ್ನ ಅಡವಿಟ್ಟಿದ್ದನು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿದ ಪೊಲೀಸರು
ಈ ಎಲ್ಲಾ ಕಿರುಕುಳಗಳ ಕುರಿತು ದೇವಿಕಾ ಮುಂಚೆಯೇ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರೂ, ಪ್ರಸನ್ನ ತನ್ನ ಹಠ ತೊರೆಯಲಿಲ್ಲ. ಕೇವಲ ಒಂದು ಕ್ಷಣ ಯಡವಿದ್ದರೆ ದೇವಿಕಾಳ ಪ್ರಾಣವೇ ಹೋಗುತ್ತಿತ್ತು. ಸದ್ಯ, ಈ ಪ್ರಕರಣವನ್ನು ಬ್ಯಾಡರಹಳ್ಳಿ ಪೊಲೀಸರು ದಾಖಲಿಸಿದ್ದು, ಆರೋಪಿ ಪ್ರಸನ್ನ ಅಲಿಯಾಸ್ ಚಂದು ಅವರನ್ನು ಬಂಧಿಸಿದ್ದಾರೆ.






