---Advertisement---

ಬಸವಾದಿ ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ

By guruchalva

Published on:

Follow Us
---Advertisement---

ಬಸವಾದಿ ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ ತುಂಬಿದ್ದು, ಇಂದಿಗೂ ಅದು ನವೀನವಾಗಿದೆ,” ಎಂದು ಶಿಕ್ಷಕ ಡಾ. ಶಿವಲಿಂಗ ಹೇಡೆ ಹೇಳಿದರು.

ನಗರದ ಲಿಂಗಾಯತ ಮಹಾ ಮಠದ ಬಸವಗಿರಿಯಲ್ಲಿ ಸೋಮವಾರ ನಡೆದ 264ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣರು ಮತ್ತು ಪರಿಸರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಅವರು ಮಾತನಾಡುತ್ತಾ, “ಶರಣರು ಸಕಲ ಜೀವಿಗಳ ಕ್ಷೇಮವನ್ನು ಬಯಸಿದ್ದು, ಪಶು, ಪಕ್ಷಿ, ಕ್ರಿಮಿ, ಕೀಟ ಹಾಗೂ ಸಸ್ಯ ಸಂಕುಲದ ಸಮತೋಲನ ಇದ್ದರೆ ಮಾತ್ರ ಭೂಮಿಯ ಸುಸ್ಥಿರತೆ ಸಾಧ್ಯ. ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡಬಾರದು. ಪಂಚಭೂತಗಳು ದೇವರ ಕೊಡುಗೆ. ಅದನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ,” ಎಂದು ಹೇಳಿದರು.

ಅವರು ಮುಂದುವರೆದು, “‘ಬಸವಣ್ಣನು ಕೊಲ್ಲೆನ್ನಯ್ಯ, ಮೆಲ್ಲೆನ್ನಯ್ಯ ಎಂದು ಜೀವನದ ಪಾವಿತ್ರ್ಯವನ್ನು ಸಾರಿದ್ದಾರೆ. ದಯವೇ ಧರ್ಮದ ಮೂಲ. ಭಯದ ಧರ್ಮ ಬೇಡ’ ಎಂದು ಶರಣರು ಬೋಧಿಸಿದ್ದಾರೆ,” ಎಂದು ತಿಳಿಸಿದ್ದಾರೆ.

ಪ್ರಭುದೇವ ಸ್ವಾಮೀಜಿ ಮಾತನಾಡಿ, “900 ವರ್ಷಗಳ ಹಿಂದೆಯೇ ಶರಣರು ಸಸ್ಯಗಳಲ್ಲಿಯೂ ಜೀವವಿದೆಯೆಂದು ಅರಿತಿದ್ದರು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು ಅವರ ವಚನಗಳಲ್ಲಿ ಪ್ರಕೃತಿಯ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ಇಂದು ಅದನ್ನು ನಾವು ಅಳವಡಿಸಿಕೊಳ್ಳಬೇಕು,” ಎಂದರು.

“ಒಬ್ಬೊಬ್ಬರು ವರ್ಷಕ್ಕೆ ಒಂದು ಸಸಿಯಾದರೂ ನೆಟ್ಟು ಬೆಳೆಸಿದರೆ ಜಗತ್ತು ಹೆಚ್ಚು ಹಸಿರು ಮತ್ತು ಸುಂದರವಾಗುತ್ತದೆ” ಎಂದು ಸಲಹೆ ನೀಡಿದರು.

ಮಹಾ ಮಠದಿಂದ ಹಮ್ಮಿಕೊಂಡಿರುವ ‘ಅನ್ನಪೂರ್ಣ ಯೋಜನೆ’ ಯಶಸ್ವಿಯಾಗಿ ಸಾಗುತ್ತಿದೆ. ಹಸಿದವರಿಗೆ ಆಹಾರ ನೀಡುವ ಈ ಯೋಜನೆಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.

ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಮೋಳಕೇರಿ ಉದ್ಘಾಟಿಸಿದರು.
ಮಲ್ಲಿಕಾರ್ಜುನ ಮೋಳಕೇರಿ, ಶಿಕ್ಷಕ ವೈಜಿನಾಥ ಹುಣಚಗೇರಿ, ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಪರಿಷತ್ ಸದಸ್ಯ ಹಾವಶೆಟ್ಟಿ ಪಾಟೀಲ ಹಾಗೂ ಡಾ. ಶಿವಲಿಂಗ ಹೇಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿದರು. ಪರುಷಕಟ್ಟೆಯ ಚನ್ನಬಸವಣ್ಣ ಹಾಗೂ ಶ್ಯಾಮಲಾ ಎಲಿ ವಚನಗಾಯನ ಮಾಡಿದರು.

ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಜಗದೇವಿ ಜಗನ್ನಾಥ ಚಿಮಕೋಡೆ ಗುರುಪೂಜೆ ಸಲ್ಲಿಸಿ ಭಕ್ತಿ ದಾಸೋಹ ಮಾಡಿದರು.

---Advertisement---

Leave a Comment