ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಅವರ ಫೇಸ್‌ಬುಕ್ ಖಾತೆ ಸೈಬರ್ ಖದೀಮರ ಬಲಿಯಾಗಿದ್ದು, ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ. ಖದೀಮರು ಪ್ರಿಯಾಂಕಾ ಹೆಸರಿನಲ್ಲಿ ಅವರ ಸ್ನೇಹಿತರಿಗೆ ಮೆಸೇಜ್ ಕಳುಹಿಸಿ, ತಾವು ತುರ್ತು ಪರಿಸ್ಥಿತಿಯಲ್ಲಿ ಇದ್ದೇವೆಂದು ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದಾರೆ.
ಈ ಕುರಿತು ಪ್ರಿಯಾಂಕಾ ಉಪೇಂದ್ರ ಮಾಧ್ಯಮಗಳೊಂದಿಗೆ ಸ್ಪಷ್ಟನೆ ನೀಡಿದ್ದು ತಮ್ಮ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಆಗಿದ್ದು, ತಮ್ಮ ಆಪ್ತರ ಬಳಿ ಹಣ ಕೇಳಲಾಗುತ್ತಿದೆ. ದಯಮಾಡಿ ಯಾರೂ ಹಣ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
“ನನ್ನ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣದ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಖದೀಮರು ಈಗಾಗಲೇ ಹಲವರಿಗೆ ನಾನು ತುರ್ತು ಪರಿಸ್ಥಿತಿಯಲ್ಲಿ ಸಿಕ್ಕಿದ್ದೇನೆಂದು ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇದರೊಂದಿಗೆ ನನಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ದಯವಿಟ್ಟು ನನ್ನ ಖಾತೆಯಿಂದ ಹಣಕ್ಕೆ ಬೇಡಿಕೆ ಬಂದರೆ ನನಗಾಗಲಿ, ಉಪೇಂದ್ರನಿಗಾಗಲಿ ಸಂಪರ್ಕಿಸದೆ ಹಣ ಕಳುಹಿಸಬೇಡಿ” ಎಂದು ಪ್ರಿಯಾಂಕಾ ಉಪೇಂದ್ರ ಮನವಿ ಮಾಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಖದೀಮರ ಪತ್ತೆಗೆ ತನಿಖೆಗೆ ನಡೆಸಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಉಪ್ಪಿ ಅವರು ವಿಡಿಯೋ ಮಾಡಿ ಮನವಿ ಮಾಡಿದ್ದಾರೆ. ಪ್ರಿಯಾಂಕಾ ಅವರಿಗೆ ಬೆಳಗ್ಗೆ ಒಂದು ನಂಬರ್ ಬಂದಿದೆ. ಅವರು ಏನೋ ಒಂದು ಆರ್ಡರ್ ಮಾಡಿದ್ದರು. ಯಾರೋ ಒಬ್ಬ ಹ್ಯಾಕರ್ ಫೋನ್ ಮಾಡಿ, ಅವರ ಅಕೌಂಟ್‌ನ್ನು ಹ್ಯಾಕ್ ಮಾಡಿದ್ದಾನೆ. ನನ್ನ ಕೈಯಿಂದಲೂ ಗೊತ್ತಿಲ್ಲದೆ ಪ್ರಿಯಾ ಅವರು ಕಾಲ್ ಮಾಡಿಸಿದ್ದಾರೆ. ನನ್ನ ಫೋನ್ ಮತ್ತು ಪ್ರಿಯಾ ಅವರ ಫೋನ್ ಹ್ಯಾಕ್ ಆಗಿದೆ. ನನ್ನ ಫೋನ್ ಹಾಗೂ ಪ್ರಿಯಾ ಅವರ ಫೋನಿನಿಂದ ದುಡ್ಡು ಕಳುಹಿಸುವ ಮೆಸೇಜ್ ಬಂದರೆ, ದಯವಿಟ್ಟು ಯಾರೂ ದುಡ್ಡು ಕಳಿಸೋಕೆ ಹೋಗಬೇಡಿ. ಆದಷ್ಟು ಬೇಗ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಉಪ್ಪಿ ಹೇಳಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳ ಮೇಲೂ ಕಿಡಿಗೇಡಿಗಳು ಕಣ್ಣಿಟ್ಟಿದ್ದು, ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಕೇಳುತ್ತಿದ್ದಾರೆ.






