ಜಿಲ್ಲಾ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಸಿ.ಎನ್. ಮಹಾಲಕ್ಷ್ಮಮ್ಮ ಅವರು ಹೆರಿಗೆ ಮಾಡಿಸಲು ಲಂಚ ಪಡೆದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಹೊರಬಿದ್ದಿದೆ. ಶನಿವಾರ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಮ್ಮ ತೀರ್ಪು ಪ್ರಕಟಿಸಿ, ಅವರಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.20 ಸಾವಿರ ದಂಡ ವಿಧಿಸಿದೆ.
ಜಿ.ಟಿ. ಮುಕುಂದ ಎಂಬ ಕೋತಿತೋಪು ನಿವಾಸಿಯವರು ತಮ್ಮ ಪತ್ನಿ ಸವಿತಾ ಅವರನ್ನು ಹೆರಿಗೆ ಸಲುವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆ ಸಂದರ್ಭದಲ್ಲಿ ವೈದ್ಯೆ ಡಾ.ಸಿ.ಎನ್. ಮಹಾಲಕ್ಷ್ಮಮ್ಮ ಅವರು ₹3 ಸಾವಿರ ಲಂಚ ಕೇಳಿದ್ದರು. ಬಯಸದಿದ್ದರೂ ತಾಯಿ ಮತ್ತು ಶಿಶುವಿನ ಆರೋಗ್ಯದ ಕಾರಣದಿಂದಾಗಿ ಮುಕುಂದ ಅವರು 2021ರ ಫೆಬ್ರವರಿ 2ರಂದು ₹2 ಸಾವಿರ ಹಣವನ್ನು ಲಂಚವಾಗಿ ನೀಡಿದರು.
ಆಸ್ಪತ್ರೆ ಡಿ ಗ್ರೂಪ್ ಸೌಕರ ಬರಕತ್ ಅಲಿ ಅವರಿಗೆ ಲಂಚದ ಹಣ ಕೊಡಿಸಿ, ಅವರಿಂದ ಸಿ.ಎನ್.ಮಹಾಲಕ್ಷ್ಮಮ್ಮ ಪಡೆದುಕೊಂಡಿದ್ದರು. ಈ ಬಗ್ಗೆ 2021 ಫೆ. 4ರಂದು ಲೋಕಾಯುಕ್ತ ಪೊಲೀಸರಿಗೆ ಮುಕುಂದ ದೂರು ನೀಡಿದ್ದರು. ತನಿಖೆ ನಡೆಸಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಎನ್.ವಿರೇಂದ್ರ, ಜಿ.ಮಂಜುನಾಥ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಯಾಸ್ಮಿನ್ ಪರವಿನ್ ಲಾಡಖಾನ ಅವರು ಈ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದರು. ಲೋಕಾಯುಕ್ತ ಪರ ವಾದವನ್ನು ವಿಶೇಷ ಸಾರ್ವಜನಿಕ ಅಭಿಯೋಜಕ ಎನ್. ಬಸವರಾಜು ಪ್ರಸ್ತಾಪಿಸಿದರು.






