ಚಿಕ್ಕಮಗಳೂರಿನಲ್ಲಿ ಪತ್ನಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದ ಶಿಕ್ಷಕ ದುರಂತವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಅವರು ಪ್ರವಾಸದ ಸಂತೋಷದಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದಾಗ ಅನಾಹುತ ಸಂಭವಿಸಿದ್ದು, ಪರಿಣಾಮವಾಗಿ ಅವರ ಪ್ರಾಣ ನಷ್ಟವಾಯಿತು.
ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಯಲ್ಲಿ ಈ ದುರಂತ ಸಂಭವಿಸಿದೆ. ಸಂತೋಷ್ (40) ಮೃತ ಶಿಕ್ಷಕ. ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಗೆ ಶಿಕ್ಷಕ ಸಂತೋಷ್ ಪತ್ನಿ ಜೊತೆ ಹೋಗಿದ್ದರು.
ಈ ವೇಳೆ ಶಿಕ್ಷಕ ತಮ್ಮ ಪತ್ನಿಯೊಂದಿಗೆ ರಸ್ತೆಬದಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಅಕಸ್ಮಾತ್ ಆಯತಪ್ಪಿ ಅವರು 60 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.
ಮೃತ ಸಂತೋಷ್ ತರೀಕೆರೆ ತಾಲೂಕಿನ ಲಕ್ಷ್ಮೀಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಮೇಲಕೆತ್ತಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂತೋಷ್ ತಮ್ಮ ಪತ್ನಿಯೊಂದಿಗೆ ಬೈಕ್ನಲ್ಲಿ ಶನಿವಾರ ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ತೆರಳಿದ್ದರು. ಮಾರ್ಗಮಧ್ಯ ಪೊಟೊ ತೆಗೆದುಕೊಳ್ಳಲು ನಿಲ್ಲಿಸಿದ್ದರು. ಈ ವೇಳೆ ಸಂತೋಷ್ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಅಗ್ನಿ ಶಾಮಕ ಸಿಂಬಂದಿ ಪ್ರಪಾತಕ್ಕೆ ಇಳಿದು ಶವ ಹೊರ ತೆಗೆದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ.






