ಕೊಡಗು ಜಿಲ್ಲೆಯ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಪ್ಯಾರಿಸ್‌ನಲ್ಲಿನ ‘ಗೆಸ್ಟ್ ವರ್ಕರ್’ (ಅತಿಥಿ ಕಾರ್ಮಿಕರು) ಯೋಜನೆಯನ್ನು ಅನುಸರಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲುವಿನಲ್ಲಿ ಸೋಮವಾರ ಸಿಎನ್‌ಸಿ ನಡೆಸಿದ 12ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ಯಾರಿಸ್‌ನಲ್ಲಿ ಟರ್ಕಿ ಮೂಲದ ಕಾರ್ಮಿಕರನ್ನು ‘ಗೆಸ್ಟ್ ವರ್ಕರ್’ ಎಂದೇ ಗುರುತಿಸಲಾಗುತ್ತದೆ. ಅದೇ ರೀತಿಯಾಗಿ ಕೊಡಗಿಗೆ ಬರುವ ಹೊರರಾಜ್ಯದ ಕಾರ್ಮಿಕರಿಗೂ ಈ ಪರಿಕಲ್ಪನೆಯನ್ನು ಅನ್ವಯಿಸಿ ನಿಯಮಿತಗೊಳಿಸಬೇಕು. ಆಗ ಮಾತ್ರ ವಲಸೆ ಕಾರ್ಮಿಕರ ಬಗ್ಗೆ ಸರಿಯಾದ ವ್ಯವಸ್ಥೆ ರೂಪಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ವಲಸೆ ಕಾರ್ಮಿಕರ ಹೆಸರಿನಲ್ಲಿ ಹೊರರಾಜ್ಯದವರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅವರ ಬಳಿ ಇರುವ ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ದಾಖಲೆಗಳನ್ನು ಪರಿಶೀಲಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ, ಹೊರರಾಜ್ಯದಿಂದ ಬರುವ ಕಾರ್ಮಿಕರನ್ನು ‘ಗೆಸ್ಟ್ ವರ್ಕರ್’ ಎಂಬ ಶೀರ್ಷಿಕೆಯಡಿ ನಿಯಮಬದ್ಧವಾಗಿ ಅನುಮತಿಸಿ, ಕೆಲಸ ಮುಗಿದ ನಂತರ ಅವರನ್ನು ಹಿಂದಿರುಗಿಸಬೇಕು. ಮುಂದಿನ ಬಾರಿ ಬರಬೇಕಾದರೆ ನವೀಕರಣ ಪ್ರಕ್ರಿಯೆ ಅನಿವಾರ್ಯವಾಗಿರಲಿ ಎಂದು ಸಲಹೆ ನೀಡಲಾಯಿತು.
ಪ್ರಸ್ತುತ ಹೊರರಾಜ್ಯಗಳಿಂದ ಕಾರ್ಮಿಕರ ದೊಡ್ಡ ಪ್ರಮಾಣದ ಆಗಮನ ಜಿಲ್ಲೆಯಲ್ಲಿ ನಡೆಯುತ್ತಿದೆ. ಇವರಿಗಾಗಿ ಪ್ರತ್ಯೇಕ ಮಾರುಕಟ್ಟೆಯೂ ರೂಪುಗೊಂಡಿದೆ. ಗೋವು ಕಳವು, ಹಲ್ಲೆ, ಸುಲಿಗೆ, ಕಳ್ಳತನ, ಅಕ್ರಮ ಮೀನುಗಾರಿಕೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೆಲವರು ತೊಡಗಿರುವ ಮಾಹಿತಿ ದೊರಕುತ್ತಿದೆ. ಇದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ‘ಗೆಸ್ಟ್ ವರ್ಕರ್’ ಎಂಬ ನಾಮದಲ್ಲಿ ಅಧಿಕೃತವಾಗಿ ಜಿಲ್ಲೆಗೆ ಕಳುಹಿಸಿ, ಕೆಲಸ ಮುಗಿದ ಬಳಿಕ ಅವರನ್ನು ಹಿಂದಿರುಗಿಸುವ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು.
ರಾಷ್ಟ್ರ ಮಟ್ಟದ ಜನಗಣತಿ ಪ್ರಕ್ರಿಯೆಯಲ್ಲಿ ಕೊಡವರಿಗಾಗಿ ವಿಶೇಷ ಕೋಡ್ ಮತ್ತು ಕಾಲಮ್ ಸೇರಿಸಬೇಕು. ಜೊತೆಗೆ, ಸಿಕ್ಕಿಂನ ‘ಸಂಘ ಮತಕ್ಷೇತ್ರ’ದ ಮಾದರಿಯಲ್ಲಿ ಕೊಡವರಿಗೆ ಸಂಸತ್ತು ಹಾಗೂ ವಿಧಾನಸಭೆಯಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.






