ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಜಂಟಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ತಕ್ಕ ಪರಿಹಾರ ತಲುಪುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಾನವ ಹಾಗೂ ಪಶು ಜೀವ ಹಾನಿಗಳಿಗೆ ಶೇ.100 ರಷ್ಟು ಪರಿಹಾರ ಒದಗಿಸಿರುವಂತೆಯೇ, ರೈತರ ಬೆಳೆ ಹಾನಿಗೂ ಸಮರ್ಪಕ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ರೈತರನ್ನು ನಿರ್ಲಕ್ಷಿಸದೇ, ತಕ್ಷಣ ಕ್ರಮ ಕೈಗೊಂಡು ಪರಿಹಾರ ವಿತರಣೆ ಮಾಡಲು ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಆದೇಶಿಸಿದರು.
ಕಲ್ಬುರ್ಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅತಿವೃಷ್ಠಿಯಿಂದಾದ ಬೆಳೆ ಹಾನಿ ಕುರಿತು ಸಮಗ್ರ ಮಾಹಿತಿ ಪಡೆದು, ಜಂಟಿ ಸಮೀಕ್ಷೆಯ ವಿವರಗಳನ್ನು ತಿಳಿದುಕೊಂಡ ನಂತರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಅವರು ವಿವರಿಸುತ್ತಾ, “ತಾವು ಸಿಎಂ ಆಗಿದ್ದ ಅವಧಿಗಿಂತ ಈ ಬಾರಿ ಮಳೆ ಹೆಚ್ಚು ಸುರಿದಿದೆ. ಸಾಮಾನ್ಯ ಪ್ರಮಾಣಕ್ಕಿಂತ 17% ಮಳೆ ಹೆಚ್ಚಾಗಿದೆ. 37 ಮಾನವ ಜೀವಹಾನಿ ಪ್ರಕರಣಗಳು ವರದಿಯಾಗಿದ್ದು ಎಲ್ಲರಿಗೂ ಪರಿಹಾರ ಒದಗಿಸಲಾಗಿದೆ. ಜಾನುವಾರುಗಳ ಸಾವು 175 ಪ್ರಕರಣಗಳು ದಾಖಲಾಗಿದ್ದು ಅವುಗಳಿಗೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೂ ಪರಿಹಾರ ಕಲ್ಪಿಸಲಾಗಿದೆ” ಎಂದರು.
ಬೀದರ್, ಕಲ್ಬುರ್ಗಿ, ಕೊಪ್ಪಳ ಹಾಗೂ ಯಾದಗೀರ್ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡಚಣೆ ಉಂಟಾಗಿದೆ. ಈ ಕಾರಣದಿಂದ ನಿಗದಿತ ಅವಧಿಯೊಳಗೆ ಸಮೀಕ್ಷೆ ಮುಗಿಸುವುದು ಸಾಧ್ಯವಾಗಲಿಲ್ಲ.
ಮಳೆ ನಿಂತ ನಂತರ ಇನ್ನೂ ಸುಮಾರು ಎಂಟು ದಿನಗಳ ಕಾಲಾವಕಾಶ ಬೇಕಾಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದರು. ದ್ರೋಣ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿರುವ ಬೆಳೆ ಹಾನಿಯ ದೃಶ್ಯಾವಳಿಯನ್ನು ಅಧಿಕಾರಿಗಳು ಸಿಎಂಗೆ ತೋರಿಸಿ ವಿವರಿಸಿದರು. ಸಭೆಯ ನಂತರ ಮುಖ್ಯಮಂತ್ರಿ ಅಫ್ಜಲಪುರ ಕ್ಷೇತ್ರದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






