ಕಮಲಶಿಲೆ ಸಿದ್ದಾಪುರ ಮುಖ್ಯರಸ್ತೆಯ ತಾರೆಕುಡ್ಲು ಬಳಿ ಸೆಪ್ಟೆಂಬರ್ 13ರಂದು ನಡೆದ ಅಪಘಾತದಲ್ಲಿ, ಕಮಲಶಿಲೆಯಿಂದ ನೆಲ್ಲಿಕಟ್ಟೆ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಕಡವೆ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (22) ಎಂದು ಗುರುತಿಸಲಾಗಿದೆ.
ಪಡುವಾಲೂ¤ರು ನಿವಾಸಿ ವಿಠಲ ಅವರ ಪುತ್ರ ವಿಘ್ನೇಶ್ (19) ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆ. 13ರ ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸ್ನೇಹಿತರು ತಾರೆಕೊಡ್ಲು ಬಳಿ ತಲುಪಿದಾಗ, ದೊಡ್ಡ ಕಡವೆ ಬೈಕಿಗೆ ಅಡ್ಡ ಬಂದ ಪರಿಣಾಮ ಬೈಕ್ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ದುರಂತದಲ್ಲಿ ಬೈಕ್ ಸಂಪೂರ್ಣವಾಗಿ ನಜ್ಜುನುಜ್ಜಾಗಿದ್ದು, ಕಡವೆ ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ.
ನೆಲ್ಲಿಕಟ್ಟೆಯ ಸುರೇಶ್ ಮೊಗವೀರ ಹಾಗೂ ಯಶೋದಾ ಮೊಗವೀರ ದಂಪತಿಯ ಕಿರಿಯ ಪುತ್ರ ಶ್ರೇಯಸ್ (22) ಮೃತಪಟ್ಟಿದ್ದು, ಹಿರಿಯ ಪುತ್ರಿ ಈಗಾಗಲೇ ವಿವಾಹಿತಳಾಗಿದ್ದಾಳೆ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಶ್ರೇಯಸ್ ಇತ್ತೀಚೆಗೆ ಊರಿಗೆ ಬಂದಿದ್ದರು.
ಘಟನೆ ಬಳಿಕ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಡಿಎಫ್‌ಒ ಗಣಪತಿ, ಆರ್‌ಎಫ್‌ಒ ಜ್ಯೋತಿ ಮೊದಲಾದ ಗಣ್ಯರು ಶ್ರೇಯಸ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಪ್ರಕರಣವನ್ನು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.






