ಉಡುಪಿ ನಗರಸಭೆ ಹಾಗೂ ಮಲ್ಪೆಯ ಶ್ರೀಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಆಶ್ರಯದಲ್ಲಿ, ಬೆಂಗಳೂರಿನ ಮೆಸರ್ಸ್ ಯಶಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಸಹಭಾಗಿತ್ವದಲ್ಲಿ ಭವ್ಯ ಉದ್ಯೋಗ ಮೇಳವನ್ನು ಶನಿವಾರ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳು ಪಾಲ್ಗೊಂಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಕೌಶಲ್ಯ ಪ್ರದರ್ಶನ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯುವ ಅವಕಾಶ ದೊರೆಯಿತು. ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ನಡೆದ ಈ ಮೇಳವು ಹಲವರ ಜೀವನದಲ್ಲಿ ಹೊಸ ದಾರಿಗೆ ನಾಂದಿ ಹಾಡುವಂತಾಯಿತು.
ಮಾಹೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಶೇಕಡಾ 60ರಷ್ಟು ಯುವಜನರು 25 ವರ್ಷದೊಳಗಿನವರಾಗಿದ್ದಾರೆಂದು ತಿಳಿಸಿದರು. ನಿರುದ್ಯೋಗ ದೇಶದ ದೊಡ್ಡ ಸಮಸ್ಯೆಯಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು. ಅನಕ್ಷರತೆ ಹಾಗೂ ಅನಾರೋಗ್ಯವನ್ನು ತೊಲಗಿಸಿದಲ್ಲಿ ಬಡತನ ನಿವಾರಣೆ ಸಾಧ್ಯವಾಗುತ್ತದೆ” ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಉದ್ಯೋಗ ಮೇಳವನ್ನು ಉದ್ಯಮಿ ಶ್ಯಾಮಿಲಿ ನವೀನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಲ್ಲಾಡಿ ಐಟಿಐ ಪ್ರಾಂಶುಪಾಲ ರೂಪೇಶ್ ಕುಮಾರ್, ಪಡುಬಿದ್ರಿಯ ಎಸ್ಪೆನ್ ವಿಶೇಷ ಆರ್ಥಿಕ ವಲಯದ ಮುಖ್ಯಸ್ಥ ಅಶೋಕ ಕುಮಾರ್, ಮಲ್ಪೆ ಶ್ರೀಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಮಿತಿಯ ಪಾಂಡುರಂಗ ಮಲ್ಪೆ, ಜ್ಞಾನೇಶ್ವರ ಕೋಟ್ಯಾನ್, ಹರಿಯಪ್ಪ ಕೋಟ್ಯಾನ್, ಉಡುಪಿ ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಕೆನರಾ ಬ್ಯಾಂಕ್ ಎಜಿಎಂ ಸಂಜೀವ ಕುಮಾರ್ ಹಾಗೂ ನಗರಸಭೆ ಸದಸ್ಯೆ ರಶ್ಮಿ ಸಿ. ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸ್ವಾಗತಿಸಿದರು. ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರಿನ ಮೆಸರ್ಸ್ ಯಶಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಸಂಸ್ಥೆಯ ನವೀನ್ ಕುಮಾರ್ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಿದರು. ಸತೀಶ್ಚಂದ್ರ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಉದ್ಯೋಗ ಮೇಳ ದಲ್ಲಿ ಒಟ್ಟು 70ಕಂಪನಿ ಭಾಗಿಯಾಗಿದ್ದು, 2000 ವಿದ್ಯಾರ್ಥಿ, ಯುವಜನರ ನೋಂದಣಿ ಮಾಡಿಕೊಂಡಿದ್ದಾರೆ.






