ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, ಆನೆ ಮಾವುತ ಮತ್ತು ಅವನ ತಂಗಿಯ ಹತ್ಯೆ, ಜೊತೆಗೆ ಪುಷ್ಪಲತಾ ಹಾಗೂ ವೇದವಳ್ಳಿ ಹತ್ಯೆಗಳ ಪ್ರಕರಣಗಳ ಹಿನ್ನೆಲೆಯಲ್ಲಿಯೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರು ಮರುಮರು ಪ್ರಸ್ತಾಪವಾಗುತ್ತಲೇ ಬಂದಿದೆ. ಈ ಪ್ರಕರಣಗಳು ಸುದ್ದಿಯಾಗುವ ಪ್ರತಿಸಾರಿ, ಅವರ ಹೆಸರು ಆರೋಪ-ವಿವಾದಗಳೊಂದಿಗೆ ಸಂಪರ್ಕಿಸಿ ಕೇಳಿಬರುತ್ತಿರುವುದು ಗಮನಾರ್ಹವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ, ಕೆಲ ಹೋರಾಟಗಾರರ ಬಾಯಿಯಲ್ಲಿಯೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಈ ಘಟನೆಗಳ ಹಿಂದೆ ಇದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದಲ್ಲದೆ ದಕ್ಷಿಣ ಕನ್ನಡದ ಅನೇಕ ಸ್ಥಳೀಯ ಯೂಟ್ಯೂಬ್ ಚಾನೆಲ್‌ಗಳು ಕೂಡ ಅವರ ವಿರುದ್ಧ ಸುದ್ದಿಗಳನ್ನು ಪ್ರಸಾರ ಮಾಡಿವೆ.
ಇತ್ತೀಚೆಗೆ ಬಿಜೆಪಿ ನಾಯಕರು “ಧರ್ಮಸ್ಥಳ ಚಲೋ” ಕಾರ್ಯಕ್ರಮ ಕೈಗೊಂಡಾಗ, ಅವರು ಸೌಜನ್ಯ ಅವರ ಮನೆಯನ್ನು ಭೇಟಿ ಮಾಡಿದ್ದರು. ಅಲ್ಲಿ ಸೌಜನ್ಯ ತಾಯಿ, ವೀರೇಂದ್ರ ಹೆಗ್ಗಡೆ ಅವರೇ ಈ ಅನ್ಯಾಯಕ್ಕೆ ಕಾರಣ ಎಂದು ಹೇಳಿ, “ನಮ್ಮ ಮನೆಯಿಂದಲೇ ಎಲ್ಲವೂ ಪ್ರಾರಂಭವಾಯಿತು, ಇಲ್ಲಿಯೇ ಎಲ್ಲವನ್ನು ನಿಲ್ಲಿಸಿಬಿಡಿ” ಎಂದು ಸ್ಪಷ್ಟವಾಗಿ ವಿಜಯೇಂದ್ರ ಅವರ ಮುಂದೆ ಹೇಳಿದ್ದಾರೆಯೆಂದು ವರದಿಯಾಗಿದೆ.
ಈ ಘಟನೆ ಮಾತ್ರವಲ್ಲದೆ, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪೈಕಿ ಬಹುತೇಕ ಪ್ರಕರಣಗಳಲ್ಲಿ ವೀರೇಂದ್ರ ಹೆಗ್ಗಡೆ ಅವರ ಹೆಸರಿನ ಪ್ರಸ್ತಾಪ ಆಗುತ್ತಲೇ ಬಂದಿದೆ. ಆಗಾಗ ನಡೆಯುವ ಹತ್ಯೆ, ದೌರ್ಜನ್ಯ ಅಥವಾ ಭೂ ವಿವಾದಗಳಲ್ಲಿ ಅವರ ಹೆಸರು ಕೇಳಿಬರುವುದೇ ಜನರಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸಿದೆ.
ನಿನ್ನೆ (ಸೆಪ್ಟೆಂಬರ್ 16) ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಮಾತನಾಡಿದರು. ಅವರು, ಧರ್ಮಸ್ಥಳಕ್ಕೆ ಸಂಬಂಧಿಸಿದ ಭೂಕಬಳಿಕೆ, ಅತಿಕ್ರಮಣ, ದುಬಾರಿ ಬಡ್ಡಿ ದಂಧೆ, ದೇವಾಲಯದ ಆದಾಯ ಮತ್ತು ಆಸ್ತಿ ದಾಖಲೆಗಳ ಗೊಂದಲ, ಕಾರ್ಮಿಕರ ವಂಚನೆ, ಸೌಜನ್ಯ ಹತ್ಯೆ, ಮಹಿಳಾ ದೌರ್ಜನ್ಯ, ಬೆಳ್ತಂಗಡಿ ಸಮಾಜ ಮಂದಿರದ ನಾಶ, ಭೂ ಆಕ್ರಮಣದ ದಾಖಲೆಗಳು ಮತ್ತು ರೂಡ್‌ಸೆಟ್ ಅನುದಾನದ ದುರ್ಬಳಕೆ ಹೀಗೆ ಅನೇಕ ಪ್ರಕರಣಗಳಲ್ಲಿ ವೀರೇಂದ್ರ ಹೆಗ್ಗಡೆ ಅವರ ಹೆಸರು ಆರೋಪಿಯಾಗಿ ಕೇಳಿಬರುತ್ತಿದೆ ಎಂದು ಹೇಳಿದರು.
ಇದರೊಂದಿಗೆ, ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪ್ರಸ್ತುತ 334 ಕೋರ್ಟ್ ಕೇಸ್‌ಗಳು ವಿಚಾರಣೆಯಲ್ಲಿವೆ ಎಂದು ಅವರು ಬಹಿರಂಗಪಡಿಸಿದರು. “ಈ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾದರೆ, ನಾವು ಹೆಗ್ಗಡೆ ಅವರ ಕಾಲಿಗೆ ಬೀಳುತ್ತೇವೆ” ಎಂದು ಸೋಮನಾಥ ನಾಯಕ್ ಸ್ಪಷ್ಟ ಸವಾಲು ಹಾಕಿದರು.






